ಶ್ಯೂರಿಟಿ ಇಲ್ಲದೆ ಸಾಲ ಕೊಡುತ್ತೇವೆ ಎಂಬ ಮಾತನ್ನು ನಂಬಿ 2 ಸಾವಿರ ಮಂದಿ ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಚ್ಚಾಗಿ ವಿದ್ಯಾವಂತರೇ ವಾಸಿಸುವ ಮಾಯಾ ನಗರಿಯಲ್ಲಿ ಇಷ್ಟೆಲ್ಲಾ ಮಂದಿ ವಂಚಕ ಮಾತಿಗೆ ಮರುಳಾಗಿದ್ದಾರೆ. ಆನಂದ್, ರೇಷ್ಮಾ, ಅಂಜುಂ, ಆನಿಯಾ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ. ಸಾಲ ಕೊಡಿಸುವುದಾಗಿ ಹೇಳಿ 2ಸಾವಿರಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೈಗ್ರೌಂಡ್ಸ್ ಪೊಲೀಸರು ರೇಷ್ಮಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀಕಾರ ಕೋ-ಆಪರೇಟಿವ್ ಸೊಸೈಟಿ ಲೋನ್ ಹೆಸರಲ್ಲಿ ವಂಚನೆ ಮಾಡಿದ್ದಾರೆ. 1 ಲಕ್ಷದಿಂದ 25ಲಕ್ಷದವರೆಗೂ ಸಾಲ ಕೊಡುವುದಾಗಿ ಹೇಳಿಕೆ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಸಾರ್ವಜನಿಕರಿಗೆ ಲೋನ್ ಕೊಡಿಸಲಿಕ್ಕೆ ಪ್ರೊಸೆಸಿಂಗ್ ಫೀಜ್ ಹಾಗೂ ಅಕೌಂಟ್ ಓಪನಿಂಗ್ ಫೀಜ್ ಹೆಸರಲ್ಲಿ ಸಾವಿರಾರು ರೂ. ಪಡೆದಿದ್ದಾರೆ ಎನ್ನುವ ಆರೋಪವಿದೆ. 15 ದಿನಗಳೊಳಗಾಗಿ ಸಾಲ ಕೊಡುತ್ತೇವೆ ಎಂದು ಹೇಳಿದ್ದರು, ಸಾಲಕ್ಕಾಗಿ ಮನವಿ ಮಾಡಿದ್ದ ಸಾರ್ವಜನಿಕರ ಮೊಬೈಲ್ ನಂಬರ್ ಅನ್ನೇ ಲೋನ್ ಅಕೌಂಟ್ ನಂಬರ್ ಎಂದು ಆರೋಪಿಗಳು ನೀಡಿದ್ದಾರೆ.
2 ಸಾವಿರಕ್ಕೂ ಹೆಚ್ಚು ಮಂದಿಯಿಂದ ಕೋಟ್ಯಂತರ ಹಣವನ್ನು ವಸೂಲಿ ಮಾಡಿದ್ದಾರೆ. ಹಣ ವಾಪಸ್ ಕೇಳಿದರೆ ಪ್ರಭಾವಿಗಳ ಹೆಸರು ಹೇಳಿ ಧಮ್ಕಿ ಹಾಕಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.