7 ದಿನದಿಂದ ನಿಂತಲ್ಲೇ ನಿಂತ ಲಾರಿಗಳು, ಊಟ-ಶೌಚಾಲಯಕ್ಕೂ ಚಾಲಕರು ಪರದಾಟ

Share with

ಕಾರವಾರ : ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 7 ದಿನಗಳಿಂದ ನೂರಾರು ಲಾರಿಗಳು ಮುಂದೆ ಹೋಗಲು ಆಗದೆ, ನಿಂತಲ್ಲೇ ನಿಲ್ಲಲು ಆಗದೆ ಪರದಾಡುಂವತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇದೀಗ ಸ್ಥಳೀಯರು ಚಾಲಕರ ನೆರವಿಗೆ ಮುಂದಾಗಿದ್ದು, ಅಂಕೋಲಾ ಚಾಲಕರ ಸಂಘದಿಂದ ಪ್ರತಿಭಟನಾ ರ‍್ಯಾಲಿ ಮಾಡಿದ್ದಾರೆ. ಆ ಮೂಲಕ ಚಾಲಕರನ್ನು ರಕ್ಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಲಾಗಿದೆ.

ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 7 ದಿನವಾಗಿದೆ. ಇನ್ನೂ ಕಾರ್ಯಚರಣೆ ಮುಂದುವರಿದ ಪರಿಣಾಮ ಹೆದ್ದಾರಿ ಪಕ್ಕದಲ್ಲೇ ನೂರಾರು ಲಾರಿಗಳು ನಿಂತುಕೊಂಡಿವೆ. ಉಪಹಾರ, ಊಟ, ಶೌಚಾಲಯಕ್ಕೂ ಲಾರಿ ಚಾಲಕರು ಪರದಾಡುವಂತಾಗಿದೆ.

ವಾರದಿಂದ ರಸ್ತೆಯಲ್ಲೇ ಇರುವುದರಿಂದ ಆರೋಗ್ಯದಲ್ಲಿ ಕೂಡ ಏರುಪೇರು ಉಂಟಾಗಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಚಾಲಕರ ಪರವಾಗಿ ಅಂಕೋಲಾ ಚಾಲಕರ ಸಂಘದಿಂದ ಪ್ರತಿಭಟನೆ ಮಾಡಲಾಗಿದೆ.

ಚಾಲಕರ ಸಂಘದಿಂದ ಶಾಸಕ ಸತೀಶ್ ಸೈಲ್​ಗೆ ತರಾಟೆ : ಮಣ್ಣು ತೆರವು ವಿಳಂಬ ಆಗಿದಕ್ಕೆ ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಕಾರಿಗೆ ಪ್ರತಿಭಟನಾನಿರತ ಚಾಲಕರ ಸಂಘದಿಂದ ಮುತ್ತಿಗೆ ಹಾಕಿದ್ದು, ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಕೋಲಾ ತಾಲೂಕಿನ ಬೆಳಸೆ ಕ್ರಾಸ್​ನಲ್ಲಿ ಶಾಸಕರ ಕಾರು ತಡೆದಿದ್ದು, ಆದಷ್ಟು ಬೇಗ ಮಣ್ಣು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಮಣ್ಣಿನಡಿ ಸಿಲುಕಿರುವವರನ್ನು ಹೊರತೆಗೆಯಬೇಕು. ವಾಹನ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.

ಮಣ್ಣಿನ ರಾಶಿಯಲ್ಲಿ ನಾಪತ್ತೆಯಾಗಿರುವ ಲಾರಿ ಪತ್ತೆಗಾಗಿ ಶೋಧ ನಡೆಯುತ್ತಿದೆ. ಕೇರಳ ಮೂಲದ ಭಾರತ್ ಬೆಂಜ್ ಲಾರಿ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಲಾರಿಯಲ್ಲಿ ಚಾಲಕ ಅರ್ಜುನ್ ಸಿಲುಕಿದ್ದಾರೆ. ಇನ್ನು ಬೆಳಗಾವಿಯಿಂದ ನಿನ್ನೆ ಶಿರೂರಿಗೆ ಯೋಧರು ಆಗಮಿಸಿದ್ದು, ಲಾರಿ ಮತ್ತು ಚಾಲಕನ ಹುಡುಕಾಟಕ್ಕೆ ಭಾರತೀಯ ಸೇನೆ ಸಾಥ್ ನೀಡಿದೆ. ಗುಡ್ಡ ಕುಸಿದ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.


Share with

Leave a Reply

Your email address will not be published. Required fields are marked *