ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಡ್ರಗ್ಸ್ ಮುಕ್ತ ಕಾರ್ಯಾಚರಣೆ ಮುಂದುವರಿಕೆ – ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ

Share with

ಡ್ರಗ್ಸ್, ಗಾಂಜಾ ಸೇರಿದಂತೆ ಎಲ್ಲಾ ಮಾದಕ ವಸ್ತುಗಳ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ, ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಡ್ರಗ್ಸ್ ಮುಕ್ತ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ. ಅವರು ನಗರದ ಪುರಭವನದಲ್ಲಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಜಾಗೃತಿ ಹಿನ್ನೆಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ ಡ್ರಗ್ಸ್ ವಿತರಣಾ ಜಾಲವನ್ನು ಸಂಪೂರ್ಣವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ವಿವಿಧ ಕಾಲೇಜುಗಳಲ್ಲಿ ನಡೆಸಿದ ವಿದ್ಯಾರ್ಥಿಗಳ ಡ್ರಗ್ಸ್‌ ತಪಾಸಣೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಇದರಿಂದ ನಶಾಮುಕ್ತ ಮಂಗಳೂರು ಅಭಿಯಾನ ಸಂಪೂರ್ಣ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿಗಳನ್ನು ಕ್ರಿಯಾಶೀಲಗೊಳಿಸುವಂತೆ ಸೂಚಿಸಿದ ಅವರು, ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾದ ಸಂಶಯಾಸ್ಪದ ವಿದ್ಯಾರ್ಥಿಗಳನ್ನು ಗುರುತಿಸಿ ಕೌನ್ಸೆಲಿಂಗ್ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಕಾರ್ಯದಲ್ಲಿ ಪೊಲೀಸ್‌ ಇಲಾಖೆ ಅಗತ್ಯ ನೆರವು ನೀಡಲಿದೆ ಎಂದರು. ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳನ್ನು ಮಾದಕ ವಸ್ತುಗಳಂತಹ ದುಷ್ಟಟಗಳಿಂದ ಮುಕ್ತಗೊಳಿಸುವ ಈ ಅಭಿಯಾನದಲ್ಲಿ ಕಾಲೇಜುಗಳು ಸಂಪೂರ್ಣವಾಗಿ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕಾಲಕಾಲಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ.

ಡ್ರಗ್ಸ್ ಸೇವನೆಗೆ ಒಳಗಾದ ವಿದ್ಯಾರ್ಥಿಗಳನ್ನು ಸಂತ್ರಸ್ತರೆಂದು ಪರಿಗಣಿಸಲಾಗುವುದು. ಆದರೆ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಯಾವುದೇ ರೀತಿಯ ದಯೆ ತೋರದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.


Share with

Leave a Reply

Your email address will not be published. Required fields are marked *