ಸಪ್ತಪದಿ ವೇಳೆ ಇಡಿ ದಾಳಿ; 15000 ಕೋಟಿ ವಂಚಕ ಮಂಟಪದಿಂದ ಪರಾರಿ..!! ದೇಶದೆಲ್ಲೆಡೆ ಸಂಚಲನ ಮೂಡಿಸಿದ ಬೆಟ್ಟಿಂಗ್ ಆ್ಯಪ್

Share with

ಜೈಪುರ: ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ ಪರಿಣಾಮ ಮಂಟಪದಿಂದಲೇ ವರ ಓಡಿಹೋಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿರುವುದು ವರದಿಯಾಗಿದೆ.

ರಾಜಸ್ಥಾನದ ಪ್ರಸಿದ್ದ ಫೇರ್‌ಮಾಂಟ್ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ನಡೆಯುತ್ತಿತ್ತು. ಇದು ಸೌರಭ್ ಅಹುಜಾ ಎನ್ನುವವರ ವಿವಾಹವಾಗಿತ್ತು. ಈ ಸೌರಭ್ ಅಹುಜಾ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯಾಗಿದ್ದಾನೆ.

15,000 ಕೋಟಿ ರೂಪಾಯಿಗಳ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿತ್ತು. ಸೌರಭ್ ಅಹುಜಾ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದಾನೆ.

ಮದುವೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಇ.ಡಿ ಸೌರಭ್ ಬಂಧನಕ್ಕೆ ಮಂಟಪಕ್ಕೆ ದಾಳಿ ನಡೆಸಿತ್ತು. ಆದರೆ ‘ಸಪ್ತಪದಿ’ ತುಳಿಯುವ ಮುನ್ನ ಇ.ಡಿ ತನ್ನ ಬಂಧನಕ್ಕೆ ಬರುತ್ತಿರುವ ಬಗ್ಗೆ ಅರಿತ ಸೌರಭ್ ಮಂಟಪದಿಂದಲೇ ಪರಾರಿ ಆಗಿದ್ದಾನೆ ಎಂದು ವರದಿ ತಿಳಿಸಿದೆ.

ಮೂವರ ಬಂಧನ:

ಮಂಟಪಕ್ಕೆ ಸೌರಭ್ ಬಂಧನಕ್ಕೆ ಬಂದಿದ್ದ ಅಧಿಕಾರಿಗಳು, ಹಗರಣಕ್ಕೆ ಸಂಬಂಧಿಸಿದ ಪ್ರಣವೇಂದ್ರ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಇದಲ್ಲದೆ ಸೌರಭ್ ಎಲ್ಲಿದ್ದಾನೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ವಧು, ಅವರ ಕುಟುಂಬ ಸದಸ್ಯರು ಮತ್ತು ಇತರ ನಿಕಟ ಸಂಬಂಧಿಗಳನ್ನು ಸಹ ಪ್ರಶ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸೌರಭ್ ಬಂಧನಕ್ಕೆ ಜೈಪುರಕ್ಕೆ ಬಂದಿದ್ದ ಇ.ಡಿ:

ಮಹಾದೇವ್‌ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟುಗಳನ್ನು ನಿರ್ವಹಿಸಿದ ಆರೋಪ ಸೌರಭ್ ಮೇಲಿದೆ ಎನ್ನಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಸ್ವಲ್ಪ ಸಮಯದಿಂದ ಸೌರಬ್‌ನನ್ನು ಟ್ರ್ಯಾಕ್ ಮಾಡುತ್ತಿತ್ತು. ಮದುವೆ ವೇಳೆಯೇ ಅವನನ್ನು ಬಂಧಿಸುವ ನಿಟ್ಟಿನಲ್ಲಿ ರಾಯ್‌ಪುರದಿಂದ ಜೈಪುರಕ್ಕೆ ಒಂದು ತಂಡವನ್ನು ಕಳುಹಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಮಹಾದೇವ್ ಬೆಟ್ಟಿಂಗ್ ಆ್ಯಪ್ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದೆ. ಈ ಹಗರಣದಲ್ಲಿ ಖ್ಯಾತನಾಮರು ಸೇರಿ ಹಲವರ ಹೆಸರು ಕೂಡ ಹರಿದಾಡಿದೆ. ಬಾಲಿವುಡ್‌ನಲ್ಲೂ ಈ ಸಂಬಂಧ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಹಿಂದೆ ನಟ ಮತ್ತು ಫಿಟೈಸ್ ಪ್ರಭಾವಿ ಸಾಹಿಲ್ ಖಾನ್ ನನ್ನು ಈ ಹಗರಣ ಸಂಬಂಧ ಬಂಧಿಸಲಾಗಿತ್ತು. ಸದ್ಯ ಜೈಪುರದಲ್ಲಿ ಬಂಧಿತರಾಗಿರುವ ಅರೋಪಿಗಳನ್ನು ವಿಚಾರಣೆ ನಡೆಸಿ, ಸೌರಬ್ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ವರದಿ ತಿಳಿಸಿದೆ.


Share with

Leave a Reply

Your email address will not be published. Required fields are marked *