ಮಂಗಳೂರು: ಭಾರತ ಜಗತ್ತಿನಲ್ಲೇ ಐದನೇ ಅತಿದೊಡ್ಡ ಆರ್ಥಿಕತೆ ಯಾಗಿರುವುದಕ್ಕೆ ಪರಿಣಾಮಕಾರಿ ನಾಯಕತ್ವ ಹಾಗೂ ರಾಷ್ಟ್ರದ ನೀತಿಗಳೂ ಕಾರಣವಾಗಿವೆ. ಮೂರನೇ ಬಾರಿಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಡಿಜಿಟಲ್ ಮೂಲಸೌಕರ್ಯ, ವಿತ್ತೀಯ ಸೇರ್ಪಡೆ ಹಾಗೂ ಯುವಜನರ ಕೌಶಲ ಸುಧಾರಣೆಗೆ ಆದ್ಯತೆ ನೀಡುವ ಖಚಿತ ನಿರ್ದೇಶನಗಳನ್ನು ಹೊಂದಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬುಧವಾರ ಸಿಟಿಜನ್ ಕೌನ್ಸಿಲ್ ವತಿಯಿಂದ ಹಮ್ಮಿಕೊಳ್ಳಲಾದ ಅನೌಪಚಾರಿಕ ಸಂವಾದ ಸಮಾರಂಭದಲ್ಲಿ ಮಾತನಾಡಿದರು.
ಭಾರತ 2014ರಲ್ಲಿ 10ನೇ ಸ್ಥಾನದಲ್ಲಿತ್ತು, ಈಗ ನಿರಂತರ ಬೆಳವಣಿಗೆ ಕಂಡು 5ನೇ ಸ್ಥಾನಕ್ಕೆ ಏರಿದೆ. ಆದರೆ ಇದರಲ್ಲಿ ಯಾವುದೆ ವಿಶೇಷ ಇಲ್ಲ, ಇದು ಸಹಜವಾಗಿ ಆಗುವ ಪ್ರಕ್ರಿಯೆ. ಇದರಲ್ಲಿ ನಾಯಕತ್ವದ ಯಾವುದೇ ಪಾತ್ರ ಇಲ್ಲ ಎನ್ನುವಂತಹ ವ್ಯಾಖ್ಯಾನಗಳನ್ನು ಕೆಲವರು ನೀಡುತ್ತಿದ್ದಾರೆ. ಆದರೆ ಸವಾಲುಗಳನ್ನು ಎದುರಿಸುವಾಗ, ತೆರಿಗೆ ನೀತಿ ರೂಪಿಸುವಾಗ, ಕೃಷಿ, ಕೈಗಾರಿಕೆ, ಎಂಎಸ್‌ಎಂಇ ಕ್ಷೇತ್ರದ ನೀತಿಗಳನ್ನು ರೂಪಿಸುವುದು ಕೂಡ ಅದರದ್ದೇ ಆದ ಪ್ರಭಾವ ಬೀರುತ್ತದೆ. ಕೋವಿಡ್ ವೇಳೆ ಆಡಳಿತದಲ್ಲಿದ್ದ ಐವತ್ತಕ್ಕೂ ದೇಶಗಳಲ್ಲಿ ಸರಕಾರಗಳು ಅಧಿಕಾರ ಕಳೆದುಕೊಂಡಿವೆ. ಆದರೆ ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತದ ವೈಖರಿ ಹಾಗೂ ಜನರಿಗೆ ಅವರ ಮೇಲಿನ ವಿಶ್ವಾಸದಿಂದಾಗಿ ಮತ್ತೆ ಅಧಿಕಾರಕ್ಕೆ ಬಂದಿದೆ ಎಂದರು.