ಮಂಜೇಶ್ವರ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಂಬಂಧ ಚುನಾವಣಾ ಕರ್ತವ್ಯದಲ್ಲಿದ್ದ ಉಪತಹಶೀಲ್ದಾರ್‌ಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ನಾಲ್ವರಿಗೆ ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ಆದೇಶ ನೀಡಿದೆ.
ಜೊತೆಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದೂ, ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಲು ನ್ಯಾ.ಅಬ್ದುಲ್ ಬಾಸಿತ್ ಆದೇಶಿಸಿದ್ದಾರೆ. ಬಶೀರ್, ಅಬ್ದುಲ್ ಖಾದರ್ ಮತ್ತು ಅಬ್ದುಲ್ಲಾ ಶಿಕ್ಷೆಗೊಳಗಾದ ಇತರರು.
ಈ ಘಟನೆ ನಡೆದಿರುವುದು 2010ರಲ್ಲಿ. ತಾಂತ್ರಿಕ ಕಾರಣದಿಂದ ಮತದಾರರೋರ್ವರ ಹೆಸರು ಪಟ್ಟಿಗೆ ಸೇರ್ಪಡೆಗೊಳಿಸದೇ ಪೆಂಡಿಂಗ್ ಇಡಲಾಗಿತ್ತು. ಈ ವಿಚಾರವಾಗಿ ಅಂದು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಎಕೆಎಂ ಅಶ್ರಫ್ ಮತ್ತು ಇತರ ಮೂವರು ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಉಪ ತಹಶೀಲ್ದಾರ್ ದಾಮೋದರನ್ ಅವರನ್ನು ಪ್ರಶ್ನಿಸಿದ್ದರು. ತಾಂತ್ರಿಕ ಸಮಸ್ಯೆ ಪರಿಹಾರಗೊಂಡ ಬಳಿಕವಷ್ಟೇ ಮತದಾರರ ಪಟ್ಟಿಗೆ ಹೆಸರು ಸೇರಿಸುತ್ತೇನೆ. ಈ ಕುರಿತಾದ ದಾಖಲೆ ಸಲ್ಲಿಸಿ ಎಂದು ಉಪತಹಶೀಲ್ದಾರ್ ಹೇಳಿದ್ದರು. ಆದರೆ ಇದರಿಂದ ರೊಚ್ಚಿಗೆದ್ದ ಅಶ್ರಫ್ ಮತ್ತು ಸಹಚರರು ಸರಕಾರಿ ಕೃತ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿತ್ತು. ಇದರಲ್ಲಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿತ್ತು. ಕೈಯಿಂದ ಹಲ್ಲೆ ಪ್ರಕರಣ ಸಂಬಂಧ ಐಪಿಸಿ 253 ಸೆಕ್ಷನ್‌ನಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಎರಡು ವರ್ಷಕ್ಕೂ ಕಡಿಮೆ ಅವಧಿಯ ಜೈಲು ಶಿಕ್ಷೆ ಆಗಿರುವುದರಿಂದ ಶಾಸಕ ಸ್ಥಾನಕ್ಕೆ ಚ್ಯುತಿ ಇಲ್ಲ. ಆದರೆ ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಎಕೆಎಂ ಅಶ್ರಫ್ ತಿಳಿಸಿದ್ದಾರೆ.