ನೇರ್ತನೆ ಪ್ರದೇಶದಲ್ಲಿ ಆನೆಗಳ ಹಾವಳಿ, ಕೃಷಿ ನಾಶ

Share with

ಬೆಳ್ತಂಗಡಿ: ಧರ್ಮಸ್ಥಳದ ನೇರ್ತನೆ ಪ್ರದೇಶದಲ್ಲಿ ಸೆ.14ರಂದು ಹಗಲು ಹೊತ್ತಿನಲ್ಲಿಯೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ನಾಗರಿಕರಲ್ಲಿ ಭಯ ಮೂಡಿಸಿದೆ.
ಒಂದು ಮರಿಯಾನೆ ಹಾಗೂ ಎರಡು ದೊಡ್ಡ ಆನೆಗಳು ಈ ಗುಂಪಿನಲ್ಲಿ ಇದ್ದು ನೇರ್ತನೆ ಅರಣ್ಯದಿಂದ ಹೊರ ಬಂದು ಜನವಸತಿ ಪ್ರದೇಶಗಳಲ್ಲಿ ಓಡಾಡಿಕೊಂಡು,ಕೃಷಿ ನಾಶಮಾಡುತ್ತಿವೆ. ನೇರ್ತನೆಯಲ್ಲಿ ಕೃಷಿಯಿಲ್ಲದೆ ಕಾಡು ಬೆಳೆದಿರುವ ಖಾಸಗಿ ಜಾಗದಲ್ಲೂ ಬುಧವಾರ ಆನೆಗಳು ಕಾಣಿಸಿಕೊಂಡಿದೆ. ಅದೇ ಪರಿಸರದಲ್ಲಿ ಆನೆಗಳು ತಿರುಗಾಟ ನಡಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ಈ ಪ್ರದೇಶದಲ್ಲಿ ಕಾಣಿಸಿಕೊಂಡು ಕೃಷಿಗೆ ವ್ಯಾಪಕವಾದ ಹಾನಿಯುಂಟು ಮಾಡುತ್ತಿವೆ ಕಾಡಾನೆಗಳನ್ನು ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ನಡೆಸಿರುವ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು ಇದೀಗ ಹಗಲು ವೇಳೆಯಲ್ಲಿಯೇ ಆನೆಗಳು ತೋಟಗಳಿಗೆ ನುಗ್ಗಲು ಆರಂಭಿಸಿದವೆ.

ಕಾಡಾನೆಗಳನ್ನು ಓಡಿಸಲು ಪಟಾಕಿಗಳನ್ನು ಸಿಡಿಸುವ ಪ್ರಯತ್ನಗಳು ಸಂಪೂರ್ಣ ವಿಫಲವಾಗುತ್ತಿದೆ. ಪಟಾಕಿ ಸದ್ದಿಗೆ ಆನೆಗಳು ಹೊಂದಿಕೊ‌ಂಡಿದ್ದು ಯಾವುದೇ ಎಗ್ಗಿಲ್ಲದೆ ಕೃಷಿ ಭೂಮಿಗೆ ನುಗ್ಗುತ್ತಿವೆ. ಈ ಪರಿಸರದಲ್ಲಿ ಹಲವರ ತೋಟಗಳಿಗೆ ಕಾಡಾನೆಗಳು ನುಗ್ಗಿದ್ದು ದೊಡ್ಡ ಪ್ರಮಾಣದಲ್ಲಿ ಕೃಷಿಗೆ ಹಾನಿ ಉಂಟಾಗಿದೆ. ರಾತ್ರಿಯಾಗುತ್ತಿದ್ದಂತೆ ಕಾಡಾನೆಗಳು ನೇರ್ತನೆ ಸಂಪರ್ಕದ ರಸ್ತೆಗಳಲ್ಲೂ ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.

ನೇರ್ತನೆ ನಿವಾಸಿ ತಂಗಚ್ಚನ್ ರವರ ತೋಟದಲ್ಲಿ 40ಕ್ಕೂ ಹೆಚ್ಚು ತೆಂಗಿನ ಗಿಡ,ಅಡಕೆ, ಬಾಳೆಗಿಡಗಳಿಗೆ ಆನೆಗಳು ವ್ಯಾಪಕ ಹಾನಿ ಉಂಟು ಮಾಡಿವೆ. ಶ್ರೀನಿವಾಸ ಎಂಬವರ ತೋಟದಲ್ಲಿ ತೆಂಗು ಹಾಗೂ ಅಡಕೆ ಗಿಡಗಳನ್ನು ನಾಶಗೊಳಿಸಿವೆ. ಬಾಳೆಗಿಡಗಳನ್ನು ಸಂಪೂರ್ಣವಾಗಿ ನೆಲಕ್ಕೆ ಉರುಳಿಸಿವೆ ಜೋಸೆಫ್ ಹಾಗೂ ಕ್ಸೇವಿಯರ್ ಎಂಬವರ ತೋಟದಲ್ಲಿಯೂ ಕೃಷಿಗೆ ಹಾನಿಯುಂಟುಮಾಡಿದೆ. ಪೊಸಳಿಕೆಯ ಕೃಷ್ಣ ಎಂಬವರ ತೋಟದ ಬಾಳೆ,ಅಡಕೆ, ಕಬ್ಬಿಗೆ ಹಾನಿಯುಂಟು ಮಾಡಿದೆ. ರಾಜಣ್ಣ ಎಂಬವರ ಜಾಗಕ್ಕೆ ನುಗ್ಗಿದ್ದು ಮರಗೆಣಸಿನ ಗಿಡಗಳನ್ನು ನೆಲಸಮಗೊಳಿಸಿವೆ.

ಚಾರ್ಮಾಡಿಯಲ್ಲಿ- ಮುಗುಳಿದಡ್ಕ ಸೇಸಪ್ಪ ಗೌಡ ಅವರ ತೋಟಕ್ಕೆ ಕಳೆದ ಎರಡು ದಿನಗಳ ಹಿಂದೆ ನುಗ್ಗಿದ ಕಾಡಾನೆಗಳು 92 ಅಡಕೆ ಮರ ಹಾಗೂ ಎರಡು ತೆಂಗಿನ ಮರಗಳನ್ನು ಪುಡಿಗೈದಿದ್ದು ಅಪಾರ ಪ್ರಮಾಣದ ಕೃಷಿ ನಾಶವಾಗಿದೆ.
ಹೀಗೆ ಕಾಡಾನೆಗಳು ಅಲ್ಲಲ್ಲಿ ದಾಳಿ ನಡೆಸುತ್ತಿದ್ದು, ಒಂದೇ ಹಿಂಡಿನಿಂದ ದಾಳಿ ನಡೆಯುತ್ತಿದೆಯೇ, ಅಥವಾ ಇನ್ನಷ್ಟು ಕಾಡಾನೆಗಳು ಈ ಭಾಗದಲ್ಲಿ ಸಂಚರಿಸುತ್ತಿವೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಧರ್ಮಸ್ಥಳದ ನೇರ್ತನೆ ಪರಿಸರದಲ್ಲಿ ಆನೆಗಳು ತಿರುಗಾಟ ನಡೆಸುವುದು ಕಂಡು ಬಂದಿದೆ. ಪರಿಶೀಲನೆ ನಡೆಸಿದ್ದು,ಈಗಾಗಲೇ ಇಲ್ಲಿ ಇಲಾಖೆ ಸಿಬ್ಬಂದಿ, ಸ್ಥಳೀಯರ ಜತೆ ರಾತ್ರಿ ಗಸ್ತು ನಡೆಸುತ್ತಿದ್ದಾರೆ. ಗುರುವಾರದಿಂದ ಸಂಜೆ 5ಗಂಟೆಯಿಂದಲೆ ಡಿಆರ್ ಎಫ್ ಒ ನೇತೃತ್ವದಲ್ಲಿ ಗಸ್ತು ಕಾರ್ಯಾಚರಣೆ ನಡೆಯಲಿದೆ ಎಂದು ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್ ಎಫ್ ಒ ಬಿ.ಜಿ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಇಂದು ಮನವಿ:
ಇತ್ತೀಚಿನ ಕೆಲವು ದಿನಗಳಿಂದ ನೇರ್ತನೆ ಹಾಗೂ ಇತರ ಪರಿಸರಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಜನರಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ಆನೆ ಹಾವಳಿ ತಡೆಗಟ್ಟುವ ಬಗ್ಗೆ ಈ ಪರಿಸರದ ನಾಗರಿಕರು ಗ್ರಾಮ ಪಂಚಾಯಿತಿ ಮೂಲಕ ಇಂದು ಬೆಳಿಗ್ಗೆ 10.30 ಕ್ಕೆ ಅರಣ್ಯ ಇಲಾಖೆಗೆ ಮನವಿ ನೀಡಲಿದ್ದಾರೆ.


Share with

Leave a Reply

Your email address will not be published. Required fields are marked *