ಇರ್ಮಾಡಿಬೀಡು ಹಾವಂಜೆ ಅಬ್ಬಗದಾರಗ ಶ್ರೀವೀರಭದ್ರ ಸಪರಿವಾರ ದೇವಸ್ಥಾನದ ಬ್ರಹ್ಮ ಕುಂಬಾಭಿಷೇಕ, ಶ್ರೀನಾಗದೇವರ ಪುನಃ ಪ್ರತಿಷ್ಟಾಪನೆ
ಉಡುಪಿ: ಹಾವಂಜೆ ಇರ್ಮಾಡಿ ಬೀಡು ಅಬ್ಬಗ ದಾರಗ ಶ್ರೀ ವೀರ ಭದ್ರ ಸಪರಿವಾರ ದೇವಸ್ಥಾನದಲ್ಲಿ ನಡೆಯಲಿರುವ ಶ್ರೀ ನಾಗದೇವರ ಪುನಃ ಪ್ರತಿಷ್ಟಾಪನೆ, ಬ್ರಹ್ಮ ಕಲಶಾಭಿಷೇಕ, ಶ್ರೀ ವೀರ ಭದ್ರ ಸ್ವಾಮಿಗೆ ಬ್ರಹ್ಮ ಕುಂಬಾಭಿಷೇಕ ಹಾಗೂ ಕಾಲಾವಧಿ ಕಲ್ಕುಡ ಕೋಲದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮವನ್ನು ಇರ್ಮಾಡಿ ಬೀಡು ಫ್ಯಾಮಿಲಿ ಟ್ರಸ್ಟ್‍ನ ಹಿರಿಯರಾದ ಪ್ರಸನ್ನ ಹೆಗ್ಡೆ, ನಿಟ್ಟೆ ವಿದ್ಯಾ ಸಮೂಹ ಸಂಸ್ಥೆಗಳ ಕುಲಪತಿ ಎನ್. ವಿನಯ್ ಹೆಗ್ಡೆ ಹಾಗೂ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು, ಹುಟ್ಟುವಾಗ ಮಾನವನಾಗಿ ಹುಟ್ಟದೇ ಇದ್ದರೂ ಜೀವನದಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡು ಸಾಯುವಾಗ ಮಾನವನಾಗಿ ಸತ್ತರೆ ಅದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ ಎಂದರು.
ಹುಟ್ಟಿದ ನಂತರ ಸಮಾಜದಲ್ಲಿ ಮಾನವೀಯತೆಯನ್ನು ತೋರಿದರೆ ನಾವು ಮಾನವರಾಗುತ್ತೇವೆ. ಇಂದಿನ ಸಮಾಜದಲ್ಲಿ ಮಾನವೀಯತೆ, ತೃಪ್ತಿ ಅನ್ನೋ ಗುಣ ಬಹಳ ಕಡಿಮೆಯಾಗಿದೆ. ಸಮಾಜದಲ್ಲಿ ತೃಪ್ತಿ ಹಾಗೂ ಮಾನವೀಯತೆ ಮೌಲ್ಯಗಳನ್ನು ಸೃಷ್ಟಿ ಮಾಡಬೇಕು. ಈ ನಿಟ್ಟಿನಲ್ಲಿ ಈ ಸಂದೇಶವನ್ನು ಮಕ್ಕಳಲ್ಲಿ ಅಳವಡಿಸಿದಾಗ ಖಂಡೀತವಾಗಿಯೂ ಮುಂದೆ ಸಮಾಜದಲ್ಲಿ ಶಾಂತಿ-ಸೌಹಾರ್ಧತೆ ನೆಲೆಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಶಿವರಾಮ್ ಬಿ.ಶೆಟ್ಟಿ, ಇರ್ಮಾಡಿ ಬೀಡು ಲೀಲಾ ಎಸ್. ಶೆಟ್ಟಿ, ವಿಜಯಲಕ್ಷ್ಮೀ ಯು. ಹೆಗ್ಡೆ, ಕೊಡವೂರು ರವಿರಾಜ ಹೆಗ್ಡೆ, ಆದಿ ಉಡುಪಿಯ ಕೃಷ್ಣ ಶೆಟ್ಟಿ, ಅಮೃತ ರಾಜೀವ ಆಳ್ವ, ಭಾಸ್ಕರ್ ಶೆಟ್ಟಿ, ರಕ್ಷಿತ್ ಶೆಟ್ಟಿ ಇರ್ಮಾಡಿಬೀಡು ಉಪಸ್ಥಿತರಿದ್ದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್. ನಾಗರಾಜ್ ಹೆಗ್ಡೆ ಸ್ವಾಗತಿಸಿದರು, ಸುರೇಶ್ ಬು. ಶೆಟ್ಟಿಬೆಟ್ಟು ವಂದಿಸಿದರು.