ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25,045 ಯುವ ಮತದಾರರ ಸೇರ್ಪಡೆ

Share with

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು, 18 ವರ್ಷ ತುಂಬಿದ 25,045 ಮತದಾರರು ಹೊಸದಾಗಿ ನೋಂದಣಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಣಿ ಅಭಿಯಾನ

ಯುವ ಮತದಾರರಲ್ಲಿ 3,742 ಮಂದಿ ಫಾರ್ಮ್-6 ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಶೀಘ್ರದಲ್ಲಿ ಈ ಪ್ರಕ್ರಿಯೆ ಮುಗಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡಿಸಲಾಗುತ್ತದೆ.

ಚುನಾವಣಾ ಆಯೋಗವು ಪ್ರಸ್ತುತ ಪ್ರತಿ ವರ್ಷ ನಾಲ್ಕು ಅರ್ಹತಾ ದಿನಾಂಕವನ್ನು ಮತದಾರರು ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದೆ. ಪ್ರತಿ ವರ್ಷ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳ 1ನೇ ತಾರೀಕು 18 ವರ್ಷ ಪೂರ್ತಿಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಯುವ ಮತದಾರರು ಹೆಸರು ಸೇರ್ಪಡೆಗೆ ಡಿಸೆಂಬರ್ 9 ಕೊನೆಯ ದಿನಾಂಕವಾಗಿದೆ.

ಮತದಾರರು ಮೊಬೈಲ್ ಆ್ಯಪ್ VOTER HELP LINE ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ ಲೋಡ್ ಮಾಡಿ ಫಾರ್ಮ್-6 ಸಲ್ಲಿಸಬಹುದು. ಮತದಾರರು ವೆಬ್ ಸೈಟ್ voters.eci.gov.in ಇದರಲ್ಲಿಯೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು ಅಥವಾ ತಮ್ಮ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಯವರಿಗೆ ಫಾರಂ-6 ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.

ಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ 18 ವರ್ಷ ತುಂಬಿದ 45,530 ಯುವ ಜನರು ಇದ್ದಾರೆ. ಈ ಪೈಕಿ 25,045 ಜನರು ಮಾತ್ರ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿದ್ದಾರೆ. ಇನ್ನು 20,494 ಮಂದಿ ಬಾಕಿ ಇದ್ದು ಇವರನ್ನು ಮತದಾರರ ಪಟ್ಟಿಗೆ ಸೇರ್ಪಡಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ.

ಹೊಸದಾಗಿ ಸೇರ್ಪಡೆಯಾದ ಯುವ ಮತದಾರರ ವಿವರ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ – 3471, ಮೂಡಬಿದ್ರೆ -2707, ಮಂಗಳೂರು ನಗರ ಉತ್ತರ – 3235, ಮಂಗಳೂರು ನಗರ ದಕ್ಷಿಣ – 2635, ಮಂಗಳೂರು – 3171, ಬಂಟ್ವಾಳ – 3502, ಪುತ್ತೂರು- 3187, ಸುಳ್ಯ – 3137 ಯುವ ಮತದಾರರು.

ಈ ಅವಕಾಶವನ್ನು ಬಳಸಿಕೊಂಡು ಬಾಕಿ ಇದ್ದ 18 ವರ್ಷ ತುಂಬಿದ ಯುವ ಜನರು ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *