ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಸಮೀಪದ ಮಿಲ್ಲತ್ ನಗರದ ಮಸೀದಿಗೆ ಅಕ್ರಮವಾಗಿ ಪ್ರವೇಶಿಸಿ ವೀಡಿಯೊ ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯವನಾಗಿರುವ ಹನುಮಂತ ಬಂಧಿತ ಆರೋಪಿ.
ಜ.26ರಂದು ರಾತ್ರಿ ಮಸೀದಿಯೊಳಗೆ ಪ್ರವೇಶಿಸಿದ್ದ ಆರೋಪಿಯು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ. ಮದ್ಯ ಸೇವನೆ ಮಾಡಿ ತೂರಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಆರೋಪಿಯ ವಿರುದ್ಧ ಸೆ.447, 295, 295(ಎ) ನಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ತಿಳಿಸಿದ್ದಾರೆ.