ಬೆಳ್ತಂಗಡಿ: ಸುಡುಮದ್ದು ತಯಾರಿಸುವ ಘಟಕದಲ್ಲಿ ಸ್ಫೋಟ ಸಂಭವಿಸಿ, ಮೂವರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜ.28ರಂದು ಸಂಜೆ 5.30 ಸುಮಾರಿಗೆ ನಡೆದಿದೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಸಮೀಪದ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಬಶೀರ್ ಎಂಬವರ ಸುಡುಮದ್ದು ತಯಾರಿಕ ಘಟಕ ಇದೆ. ಜ.28ರಂದು ಸಂಜೆ ಪಟಾಕಿ ತಯಾರಿಕಾ ಘಟಕದಲ್ಲಿ ಸುಡುಮದ್ದು ತಯಾರಿಸುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಭಾರೀ ಶಬ್ಧದಿಂದ ಆದ ಸ್ಪೋಟದ ಸದ್ದು ಕೇಳಿ ಅಕ್ಕ ಪಕ್ಕದವರು ಸ್ಥಳಕ್ಕೆ ಬಂದಾಗ ಅಲ್ಲಿ ಇಡೀ ಗೋಡಾನ್ ಬ್ಲಾಸ್ಟ್ ಆಗಿ ಬೆಂಕಿ ಆವರಿಸಿತ್ತು. 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಕೇರಳದ ವರ್ಗೀಸ್ (68), ಹಾಸನದ ಚೇತನ್(25) ಕೇರಳದ ಸ್ವಾಮಿ(60) ಮೃತಪಟ್ಟಿದ್ದರು. ಉಳಿದಂತೆ ಕೆಲಸ ನಿರ್ವಹಿಸುತ್ತಿದ್ದ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಅವರು ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ.