
ಕಾಸರಗೋಡು: ಕಾಸರಗೋಡು ಸಹಿತ ರಾಜ್ಯದ 11
ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಗಾಳಿ ಮಳೆಗೆ ರಾಜ್ಯದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ.
ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ವ್ಯಾಪಕ ಹಾನಿಯಾಗಿದೆ. ತಗ್ಗು ಪ್ರದೇಶಗಳು ನೀರಿನಿಂದಾವೃತಗೊಂಡಿದ್ದು, ಕುಂಬಳೆಯಲ್ಲಿ ರೈಲು ಹಳಿಯಲ್ಲಿ ತೆಂಗಿನ ಮರ ಬಿದ್ದು ಹೈಟೆನ್ ವಿದ್ಯುತ್ ತಂತಿ ಹಾನಿಗೀಡಾಗಿದೆ. ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಕುಂಬಳೆ-ಕಾಸರಗೋಡು ರೈಲು ಹಳಿಯ ಮಧ್ಯೆ ಪಳ್ಳಿಕುನ್ನುನಲ್ಲಿ ತೆಂಗಿನ ಮರ ಬಿದ್ದು ಹೈಟೆನ್ಯನ್ ವಿದ್ಯುತ್ ತಂತಿ ಹಾನಿಗೀಡಾಗಿದೆ. ಕಾಸರಗೋಡು-ಮಂಗಳೂರು ಮಧ್ಯೆ ರೈಲು ಸಂಚಾರ ಮೊಟಕುಗೊಂಡಿದೆ. ಬೆಳಗ್ಗೆ ಮಂಗಳೂರಿಗೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲು ಗಾಡಿಯನ್ನು ಕಾಸರಗೋಡು ರೈಲು ನಿಲ್ದಾಣದಲ್ಲಿ ಮತ್ತು ಪ್ಯಾಸೆಂಜರ್ ರೈಲುಗಾಡಿಯನ್ನು ತಳಂಗರೆಯಲ್ಲಿ ನಿಲ್ಲಿಸಲಾಗಿತ್ತು. ಈಗ ಸಂಚಾರ ಆರಂಭವಾಗಿದೆ.
ವಾಮಂಜೂರು ಚೆಕ್‌ಪೋಸ್ಟ್ ಬಳಿಯಲ್ಲಿ ಹರಿಯುವ ಉಪ್ಪಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಸಮೀಪದ ಬಯಲು ಪ್ರದೇಶಗಳೆಲ್ಲ ನೀರು ಆವರಿಸಿದೆ. ಮಂಗಲ್ಪಾಡಿ ತಿಂಬರದಲ್ಲಿ ಪುಷ್ಪಾಕರ ಅವರ ಮನೆ ಬಳಿಯ ಬಾವಿ ಮೇಲೆ ತೆಂಗಿನ ಮರ ಬಿದ್ದಿದ್ದು, ಬಾವಿಯ ಆವರಣ ಗೋಡೆ ಕುಸಿದಿದೆ. ರಾಮಕೃಷ್ಣ ಹೊಳ್ಳ ಅವರ ಮನೆ ಸಮೀಪ ಮರವೊಂದು ಬಿದ್ದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಅಲ್ಲದೆ ಈ ಪ್ರದೇಶದ ಪರಿಸರದ ತೋಟಗಳಲ್ಲಿ ಅಡಿಕೆ ಮರಗಳು ವಿದ್ಯುತ್‌ತಂತಿ ಮೇಲೆ ಬಿದ್ದು ಹಾನಿಯಾಗಿದೆ. ಹೀಗಾಗಿ ಸುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಮೊಟಕುಗೊಂಡಿತ್ತು. ಮಂಗಲ್ಪಾಡಿ ಕೃಷ್ಣನಗರದಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಕಂಬ ಹಾನಿಗೀಡಾಗಿದೆ.
ವರ್ಕಾಡಿ ಪಂಚಾಯತ್‌ನ ಪಾತೂರುನಲ್ಲಿ ಅಬ್ದುಲ್ ಮದನಿ ಅವರ ಮನೆ ಹಾನಿಗೀಡಾಗಿದ್ದು, ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂದ್ಯೋಡ್ ಬಳಿಯ ಮುಟ್ಟಂನಲ್ಲಿ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.