ಗ್ರಾಹಕನ ವಿರುದ್ಧವೇ ಸುಳ್ಳು ಆರೋಪ..! ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧ ಕೇಸ್..!!

Share with

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ನೀಡಲಾದ ತಿಂಡಿಯಲ್ಲಿ ಹುಳು ಪತ್ತೆಯಾದ ಬಗ್ಗೆ ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ ಗ್ರಾಹಕನ ವಿರುದ್ಧ ಸುಳ್ಳು ದೂರು ನೀಡಿದ ಹೋಟೆಲ್‌ನ ಮಾಲಿಕರು ಹಾಗೂ ಮ್ಯಾನೇಜರ್ ವಿರುದ್ಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರತ್‌ಹಳ್ಳಿ ನಿವಾಸಿ ಎನ್.ನಿಖಿಲ್ ನೀಡಿದ ದೂರು ಆಧರಿಸಿ ಪೊಲೀಸರು, ರಾಮೇಶ್ವರಂ ಕೆಫೆ ಮಾಲಿಕ ರಾಘವೇಂದ್ರ ರಾವ್, ಆತನ ಪತ್ನಿ ದಿವ್ಯಾಮತ್ತು ಮ್ಯಾನೇಜರ್ ಬಿ.ಎಲ್.ಸುಮಂತ್ ವಿರುದ್ಧ ಕಿರುಕುಳ, ಸುಳ್ಳು ಆರೋಪ ಹಾಗೂ ಮಾನಹಾನಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.

ಏನಿದು ಘಟನೆ?:

ದೂರುದಾರ ನಿಖಿಲ್ ಜುಲೈ 24ರಂದು ಬೆಳಗ್ಗೆ 7.42ರ ಸುಮಾರಿಗೆ ತಮ್ಮ ಸ್ನೇಹಿತರ ಜತೆ ಗುವಾಹಟಿಗೆ ಪ್ರಯಾಣಿಸಲು ವಿಮಾನಕ್ಕೆ ಬಂದಿದ್ದರು. ಉಪಾಹಾರಕ್ಕಾಗಿ ರಾಮೇಶ್ವರಂ ಕೆಫೆಗೆ ತೆರಳಿ, ಪೊಂಗಲ್, ಫಿಲ್ಟರ್ ಕಾಫಿ ಆರ್ಡ‌ರ್ ಮಾಡಿದ್ದರು. ಆದರೆ, ಆಹಾರದಲ್ಲಿ ಕೀಟ (ಸೂಪರ್ ವರ್ಮ್) ಪತ್ತೆಯಾಗಿದ್ದು ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದರು. ಅಲ್ಲಿದ್ದ ಸಿಬ್ಬಂದಿ ಆಹಾರ ಬದಲಿಸಿಕೊಡುವುದಾಗಿ ಹೇಳಿದ್ದರು. ಅದೇ ವೇಳೆ ಕೆಫೆಗೆ ಬಂದಿದ್ದ ಗ್ರಾಹಕರು, ಘಟನೆಯ ವಿಡಿಯೋ, ಫೋಟೋ ತೆಗೆದುಕೊಂಡಿದ್ದಾರೆ. ನಂತರ, ದೂರುದಾರ ನಿಖಿಲ್ ಗಲಾಟೆ ಮಾಡದೆ ವಿಮಾನದಲ್ಲಿ ಪ್ರಯಾಣಿಸಲು ತೆರಳಿದ್ದರು ಎಂದು ಎಫ್‌ ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

25 ಲಕ್ಷ ರೂ.ಗೆ ಬೇಡಿಕೆ, ಬೆದರಿಕೆ: ಆದರೆ, ನಾನು ಕರೆ ಮಾಡಿ ಘಟನೆಯನ್ನು ಯಾರಿಗೂ ಹೇಳದಿರಲು 25 ಲಕ್ಷ ರೂ.ಗೆ ಬೇಡಿಕೆಯಿಟ್ಟು ಬೆದರಿಕೆ ಹಾಕಿದ್ದಾಗಿ ಕೆಫೆಯ ಪ್ರತಿನಿಧಿ ಬಿ.ಎಲ್.ಸುಮಂತ್ ತಮ್ಮ ವಿರುದ್ಧ ವೈಯಾಲಿ ಕಾವಲ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬಗ್ಗೆ ಜುಲೈ 27ರಂದು ಮಾಧ್ಯಮಗಳ ವರದಿಯಿಂದ ತಿಳಿದುಕೊಂಡಿದ್ದೆ. ಘಟನೆ ನಡೆದ ದಿನದಂದು ಬೆಳಗ್ಗೆ 10.27ರ ಸುಮಾರಿಗೆ ವಿಮಾನದಲ್ಲಿಯೇ ಇದ್ದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ದೂರಿನಲ್ಲಿ ಉಲ್ಲೇಖಿಸಿರುವ ಫೋನ್ ಸಂಖ್ಯೆಯೊಂದಿಗೂ ತನಗೂ ಯಾವುದೇ ಸಂಪರ್ಕ ಇಲ್ಲ. ನಾನು ಯಾವುದೇ ಪರಿಹಾರ, ಮರು ಪಾವತಿ ಅಥವಾ ಹಣಕಾಸಿನ ಬೇಡಿಕೆ ಮಾಡಿರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.

ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ

ಘಟನೆ ನಡೆದ ದಿನದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ, ತನ್ನ ಬೋರ್ಡಿಂಗ್ ಪಾಸ್, ವಿಮಾನ ಪ್ರಯಾಣದ ದಾಖಲೆ, ಸಂಬಂಧಿಸಿದ ಕರೆಗಳ ವಿವರಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕು. ಜುಲೈ 24ರಂದು ಅಹಿತಕರ ಆಹಾರ ನೀಡಿ ಜೀವಕ್ಕೆ ಅಪಾಯ ಉಂಟು ಮಾಡಲು ಪ್ರಯತ್ನಿಸ ಲಾಗಿತ್ತು. ಕೆಫೆಯ ಮಾಲಿಕರಾದ ರಾಘವೇಂದ್ರ ರಾವ್, ದಿವ್ಯಾ ರಾಘವೇಂದ್ರ ರಾವ್, ಬಿ.ಎಲ್.ಸುಮಂತ್ ಅವರು ಸುಳ್ಳು ಆರೋಪ ಹೊರಿಸಿ ಮಾನಹಾನಿ ಮಾಡಿದ್ದಾರೆ. ನನಗೆ ಕಿರುಕುಳ ನೀಡಿದ್ದಾರೆ. ತನ್ನ ವೈಯಕ್ತಿಕ ಗೌರವ ಹಾಗೂ ಪ್ರತಿಷ್ಠೆಗೆ ಹಾನಿ ಮಾಡಿದ್ದಾರೆ ಎಂದು ನಿಖೀಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವೈಯಾಲಿಕಾವಲ್‌ ಠಾಣೆಗೆ ವರ್ಗಾವಣೆ

ತನಗೆ ವ್ಯಕ್ತಿಯೊಬ್ಬ ಕರೆ ಮಾಡಿ ಕೆಫೆ ಹೆಸರು ಹಾಳು ಮಾಡದಿರಲು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಿ ಸುಮಂತ್ ಈ ಹಿಂದೆ ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಈ ಪ್ರಕರಣವನ್ನು ಅದೇ ಠಾಣೆಗೆ ವರ್ಗಾವಣೆ ಮಾಡುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.


Share with

Leave a Reply

Your email address will not be published. Required fields are marked *