ಕೌಟುಂಬಿಕ ಕಲಹ ಹಿನ್ನಲೆ: ನ್ಯಾಯಾಧೀಶರ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ..!

Share with

ಪುತ್ತೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಏಕಾಏಕಿ ಒಳನುಗ್ಗಿದ ವ್ಯಕ್ತಿಯೋರ್ವ ನ್ಯಾಯಾಧೀಶೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.

ಪುತ್ತೂರಿನ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದಾತ. ಈತನ ಸ್ಥಿತಿ ಗಂಭೀರವಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡ ಹೆಂಡತಿಯ ನಡುವಿನ ಜಗಳ ನಡೆದಿದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಕೆಲ ಹೊತ್ತಿನ ಮೊದಲೇ ಪತಿರಾಯ ವಿಷ ಸೇವಿಸಿ ಹೈಡ್ರಾಮ ಸೃಷ್ಟಿಸಿದ್ದಾನೆ.

ದಂಪತಿ ನಡುವೆ ಜಗಳ

ರವಿ ಎರಡು ದಿನಗಳ ಹಿಂದೆ ಪತ್ನಿ ವಿದ್ಯಾಶ್ರೀ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದ. ಪತಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಕಲಹ ಉಂಟಾಗಿದ್ದು, ಗಂಡ ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಈ ಮಧ್ಯೆ ಪತ್ನಿಯ ಕತ್ತು ಹಿಸುಕಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇತ್ತು. ಠಾಣೆಗೆ ಹಾಜರಾಗುವಂತೆ ಪೊಲೀಸರು ರವಿಗೆ ತಿಳಿಸಿದ್ದರು. ಈ ನಡುವೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಬಂದು ನ್ಯಾಯಾಧೀಶೆಯ ಮುಂದೆ ವಿಷ ಸೇವನೆ ಮಾಡಿದ್ದಾನೆ.

ಕೀಟನಾಶಕ ವಿಷ ಸೇವನೆ ಬಳಿಕ ರವಿ ನ್ಯಾಯಾಲಯದಲ್ಲಿಯೇ ವಾಂತಿ ಮಾಡಿದ್ದಾನೆ. ಅಲ್ಲಿನವರು ಆತನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೇರು ತೋಟಕ್ಕೆ ಸಿಂಪಡಿಸುವ ಕೀಟನಾಶಕವನ್ನು ರವಿ ಸೇವಿಸಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಂಪತಿಗಳಿಬ್ಬರು ಒಂದೇ ಆಂಬ್ಯುಲೆನ್ಸ್ ನಲ್ಲಿತೆರಳಿದ್ದರು.


Share with

Leave a Reply

Your email address will not be published. Required fields are marked *