ಪಿರಿಯಾಪಟ್ಟಣ: ರಾಜ್ಯದಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಜಮಾವಣೆಗೊಂಡ ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ರೈತ ಮುಖಂಡರು ಸರ್ಕಾರದ ಆಡಳಿತ ವೈಖರಿ ಮತ್ತು ಮುಖ್ಯಮಂತ್ರಿ ಪದವಿಗಾಗಿ ಕಚ್ಚಾಡುತ್ತಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಬಿ.ಎಂ.ರಸ್ತೆಯ ಮೂಲಕ ತಾಲೂಕು ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ತಾಲೂಕು ಕಚೇರಿಯ ಮುಂಭಾಗ ಧರಣಿ ನಡೆಸಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರೈತರ ಪ್ರಮುಖ ಸಮಸ್ಯೆಗಳಾದ ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿಯಾಗಿರುವುದು, ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾಗುತ್ತಿರುವುದು, ಕೃಷಿ ಚಟುವಟಿಕೆಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗದಿರುವುದು, ರೈತರು ತೊಂದರೆಗಳ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ದರ ದೊರಕದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಶುಂಠಿ ಮತ್ತು ಅಡಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇಲ್ಲ, ತಾಲೂಕಿನಲ್ಲಿ ರೈತರು ವ್ಯಾಪಕವಾಗಿ ಬೆಳೆದಿರುವ ಮೆಕ್ಕೆಜೋಳ ಮತ್ತು ಭತ್ತ ಸೇರಿದಂತೆ ಇತರೆ ಬೆಳೆಗಳಿಗೆ ಸರ್ಕಾರದಿಂದ ಈ ವರೆಗೂ ಖರೀದಿ ಕೇಂದ್ರಗಳು ಆರಂಭಗೊಳ್ಳದಿರುವುದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ದೂರಿದರು.
ಇಂತಹ ಸಮಯದಲ್ಲಿ ರೈತರ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರವು ಪಕ್ಷದ ಆಂತರಿಕ ಕಲಹಗಳಿಂದ ಹೆಣಗಾಡುತ್ತಿದ್ದು ಕಾಂಗ್ರೆಸ್ ಪಕ್ಷದ ಮುಖಂಡರು ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಟೀಕಿಸಿದರು.
ಇಂತಹ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ರಸ ಗೊಬ್ಬರಗಳ ದರ ಏರಿಕೆ, ಕೂಲಿಯಾಳುಗಳ ವೇತನ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ರೈತರಿಗೆ ಕೃಷಿ ವೆಚ್ಚದಲ್ಲೂ ಏರಿಕೆಯಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ನೀಡಿ ಖರೀದಿಸಲು ಮುಂದಾಗದ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿಯು ಖಂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟವು ಇನ್ನೂ ತೀವ್ರವಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶಿರಸ್ತೇದಾರ್ ಶಕೀಲಾ ಭಾನುಗೆ ಮನವಿ ಪತ್ರ ಸಲ್ಲಿಸಿದರು. ಮಾಜಿ ಶಾಸಕ ಎಚ್.ಸಿ.ಬಸವರಾಜ್, ಬಿಜೆಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸವರಾಜು, ರವಿ ಮುಖಂಡರಾದ ಆರ್.ಟಿ.ಸತೀಶ್, ಜಿ.ಸಿ.ವಿಕ್ರಂ ರಾಜ್, ಪಿ.ಜೆ.ರವಿ, ದೇವೇಂದ್ರ, ಟಿ.ರಮೇಶ್, ಲೋಕಪಾಲಯ್ಯ, ಎಂ.ಎಂ.ರಾಜೇಗೌಡ, ಶುಭಾ ಗೌಡ, ಬೆಮ್ಮತ್ತಿ ಚಂದ್ರು, ನಿರ್ಮಲಾ, ಸುಂದರೇಗೌಡ, ಅಶ್ವತ್, ಮಧು ಸೇರಿದಂತೆ ಮತ್ತಿತರರು ಇದ್ದರು.




