ಉಡುಪಿ: ಕಾರು ಮತ್ತು ಮೀನು ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ಉಡುಪಿ ಅಂಬಲಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದೆ.
ಮೀನಿನ ಲಾರಿ ಕೇರಳದ ಕಡೆಗೆ ಸಾಗುತ್ತಿತ್ತು. ಅಂಬಲಪಾಡಿ ಬಳಿ ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ಡಿವೈಡರ್ ಹತ್ತಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನಿನ ಲಾರಿ ಕೂಡ ರಸ್ತೆಗೆ ಉರುಳಿಬಿದ್ದಿದ್ದು, ಅದರ ಮುಂಭಾಗಕ್ಕೂ ಹಾನಿಯಾಗಿದೆ. ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಮೀನುಗಳನ್ನು ಬೇರೆ ವಾಹನಕ್ಕೆ ಸ್ಥಳಾಂತರ ಮಾಡಲಾಯಿತು.
ಸುದ್ದಿ ತಿಳಿದ ತಕ್ಷಣ ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.