ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮುದ್ದೂರಿನಲ್ಲಿ ಬಿಜೆಪಿ ಮುಖಂಡರಿಂದಲೇ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ.
ನೆಂಚಾರು ನಿವಾಸಿ ಪ್ರಭಾಕರ ಪೂಜಾರಿ (51) ಹಲ್ಲೆಗೆ ಒಳಗಾದ ಬಿಜೆಪಿ ಕಾರ್ಯಕರ್ತರಾಗಿದ್ದು, ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನೆರವು ನೀಡಿರುವ ಹಿನ್ನೆಲೆ ಹಲ್ಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಬಿಜೆಪಿ ಮುಖಂಡರಾದ ಪ್ರತಾಪ್ ಹೆಗ್ಡೆ, ಹರೀಶ್, ದಿನೇಶ್ ಮತ್ತು ಗಣೇಶ್ ಎಂಬುವವರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ನೆಂಚಾರು ಹಾಲು ಡೈರಿಗೆ ಹಾಲು ನೀಡಲು ಬಂದಿದ್ದ ಪ್ರಭಾಕರ ಪೂಜಾರಿಯನ್ನು ಮುಂಜಾನೆ 4 ಗಂಟೆ ಸುಮಾರಿಗೆ ಅಪಹರಣ ಮಾಡಲಾಗಿದೆ. ಆ ಬಳಿಕ ಬಿಜೆಪಿ ಮುಖಂಡ ಪ್ರತಾಪ್ ಹೆಗ್ಡೆ ಅವರ ಕಚೇರಿಯಲ್ಲಿ ವಿದ್ಯುತ್ ತಂತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಸಂಜೆಯ ತನಕ ಕಚೇರಿಯಲ್ಲಿ ಕೂಡಿಹಾಕಲಾಗಿದೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರಭಾಕರ ಪೂಜಾರಿಯನ್ನು ಅವರ ಪತ್ನಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪ್ರಭಾಕರ ಪೂಜಾರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಯ ಕುರಿತಂತೆ ಪ್ರಭಾಕರ ಪೂಜಾರಿಯವರು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.