
ಸಕಲೇಶಪು: ತಾಲ್ಲೂಕು ಕೃಷಿ ಇಲಾಖೆ ವತಿಯಿಂದ ಕ್ರಿಬ್ಕೋ ಸಂಸ್ಥೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಸಕಲೇಶಪುರ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರಿಗೆ ರಸಗೊಬ್ಬರ ದಾಸ್ತಾನನ್ನು ಪಾರದರ್ಶಕವಾಗಿ ಸಮಗ್ರ ರಸಗೊಬ್ಬರ ನಿರ್ವಹಣಾ ತಂತ್ರಾಂಶದಲ್ಲಿ ಮತ್ತು ದರ ಫಲಕದಲ್ಲಿ ನಿರ್ವಹಿಸಲು ಸಕಲೇಶಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಭೆ ಏರ್ಪಡಿಸಿ ಸೂಚಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು.ಎಂ ಪ್ರಸ್ತುತ ರಸಗೊಬ್ಬರಗಳ ವೈಜ್ಞಾನಿಕ ಬಳಕೆಯ ಅವಶ್ಯಕತೆ ಬಗ್ಗೆ, ಡಿ ಎ ಪಿ ರಸಗೊಬ್ಬರದಲ್ಲಿರುವ ರಂಜಕ ಮತ್ತು ಸಾರಜನಕ ಪೋಷಕಾಂಶಗಳಿಗೆ ಪರ್ಯಾಯವಾದ ಸಂಕೀರ್ಣ ರಸಗೊಬ್ಬರಗಳ ಮಾಹಿತಿ, ಹಾಗೂ ಅವುಗಳ ಬಳಕೆ ಬಗ್ಗೆ ಸಹಾಯದನದಡಿ ಪೂರೈಕೆಯಾಗುವ ಯೂರಿಯಾ ರಸಗೊಬ್ಬರದ ಮಾರಾಟ ಕೃಷಿ ಬಳಕೆಗೆ ಸೀಮಿತವಾಗಿರುವಂತೆ ತಿಳಿಸುತ್ತಾ, ಕೃಷಿ ಪರಿಕರಗಳಾದ ರಸಗೊಬ್ಬರ,ಬಿತ್ತನೆ ಬೀಜ ಮತ್ತು ಪೀಡೆನಾಶಕಗಳು ಅಗತ್ಯ ವಸ್ತುಗಳ ಕಾಯ್ದೆಗೆ ಒಳಪಡುವುದರಿಂದ ಆಯಾ ಪರಿಕರಗಳ ಪ್ರತ್ಯೇಕ ಕಾನೂನು ನಿಯಮಗಳಿಗನುಗುಣವಾಗಿ ರೈತರಿಗೆ ಅವುಗಳ ಸಮರ್ಪಕ ಪೂರೈಕೆ, ನಿರ್ವಹಣೆ ಹಾಗೂ ಗುಣಮಟ್ಟ ನಿಯಂತ್ರಣದ ಪರಿಪಾಲನೆ ಬಗ್ಗೆ ಕೃಷಿ ಪರಿಕರಗಳ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ಕ್ರಿಬ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿ ಪ್ರದೀಪ್ ರಸಗೊಬ್ಬರಗಳನ್ನು ತಂತ್ರಾಂಶದಲ್ಲಿ ನೋಂದಣಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಕೇಶವಮೂರ್ತಿ. ವಿವಿಧ ಕೃಷಿ ಪರಿಕರಗಳ ಗುಣ ನಿಯಂತ್ರಣ ಸಂಬಂಧಿತ ಕಾಯ್ದೆಗಳು ಮತ್ತು ಅಗತ್ಯ ವಸ್ತು ಕಾಯ್ದೆ ಬಗ್ಗೆ ಕೃಷಿ ಪರಿಕರಗಳ ಮಾರಾಟಗಾರರಿಗೆ ಅಗತ್ಯವಾದ ತರಬೇತಿ ನೀಡಿದರು.
ತಾಂತ್ರಿಕ ಅಧಿಕಾರಿ ಅಜಿತ್ ಪ್ರಸಾದ್ ರವರು ಕೃಷಿ ಇಲಾಖೆಯ ಕೇಂದ್ರ ಕಚೇರಿಯಿಂದ ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳಿಗೆ ಸಂಬಂಧಪಟ್ಟಂತೆ ರವಾನೆಯಾಗಿರುವ ಸೂಚನೆಗಳನ್ನು ಸಭೆಯಲ್ಲಿ ತಿಳಿಸಿದರು.
ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷರು ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಹೆತ್ತೂರು ದೇವರಾಜು ಮಾತನಾಡಿ ನಿಗದಿ ದರಕ್ಕಿಂತ ಹೆಚ್ಚಿನ ದರ ಟಿಎಪಿಸಿಎಂಎಸ್ ನಲ್ಲಿ ಮಾರಾಟವಾದ ರಸಗೊಬ್ಬರದ ಬಗ್ಗೆ ಪ್ರಸ್ತಾಪಿಸಿ ಅಧಿಕಾರಿಗಳು ಕ್ರಮವಹಿಸಲು ತಿಳಿಸಿ, ಪ್ರತೀ ರೈತರಿಗೆ ರಸಗೊಬ್ಬರಗಳ ಬಳಕೆಯ ಅಗತ್ಯತೆ ಬಗ್ಗೆ ಮಣ್ಣು ಪರೀಕ್ಷೆಯ ಅವಶ್ಯಕತೆ ಬಗ್ಗೆ ಹೆಚ್ಚು ಅರಿವು ಮೂಡಿಸಲು ಇಲಾಖೆ ಅಧಿಕಾರಿಗಳಿಗೆ ಮತ್ತು ಕೃಷಿ ಪರಿಕರಗಳ ಮಾರಾಟಗಾರರಿಗೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಬೀಜ ನಿಗಮದ, ಹಾಸನ ಶಾಖೆಯ ವ್ಯವಸ್ಥಾಪಕ ರಾಜೇಶ್ ಮಾತನಾಡಿ, ಕೃಷಿ ಇಲಾಖೆ ಸಕಲೇಶಪುರಕ್ಕೆ ಅಗತ್ಯವಿರುವ ಭತ್ತದ ದೃಢೀಕೃತ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಸುವುದಾಗಿ ತಿಳಿಸಿದರು.
ಸಕಲೇಶಪುರ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್, ಗೌರವಾಧ್ಯಕ್ಷ ಶಶಿಧರ್, ಕಾರ್ಯದರ್ಶಿ ರಾಜ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಕುಮಾರ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ, ತಾಂತ್ರಿಕ ವ್ಯವಸ್ಥಾಪಕ ಶ್ರವಣ್, ಖಾಸಗಿ ಮಾರಾಟಗಾರರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.




