ಮೆಟ್ರೋದಲ್ಲಿ ತಂಬಾಕು, ತಿಂಡಿ ಸೇವನೆ, ಜೋರಾಗಿ ರೀಲ್ಸ್ ಹಾಕಿದವರಿಗೆ ದಂಡ

Share with

ತಂಬಾಕು ಸೇವಿಸಿದ್ದಕ್ಕೆ 642, ತಿಂಡಿ ತಿಂದದಕ್ಕೆ 268, ಮೊಬೈಲ್ ಸದ್ದು ಮಾಡಿದ್ದಕ್ಕೆ 6520 ಕೇಸ್

ಬೆಂಗಳೂರು: ಬೆಂಗಳೂರಿಗರ ಜೀವನಾಡಿ ಎನಿಸಿರುವ ನಮ್ಮ ಮೆಟ್ರೋ ರೈಲುಗಳಲ್ಲಿ ಈ ವರ್ಷದ ಡಿಸೆಂಬರ್‌ತಿಂಗಳಲ್ಲಿಯೇ ನಿಯಮ ಉಲ್ಲಂಘನೆ ಸಂಬಂಧ ಬರೋಬ್ಬರಿ 7,429ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಡಿಸೆಂಬರ್5 ರಿಂದ 25ರ ವರೆಗಿನ ಡಾಟಾ ಪ್ರಕಾರ ಮೆಟ್ರೋದಲ್ಲಿ ಕದ್ದು-ಮುಚ್ಚಿ ತಿಂಡಿ ತಿನ್ನುವರ ಸಂಖ್ಯೆ ಕೂಡ ಹೆಚ್ಚಿದೆ. ಈ ಸಂಬಂಧ ಈವರೆಗೆ 268 ಕೇಸ್ ದಾಖಲಾಗಿದೆ. ರೀಲ್ಸ್ ನೋಡುವುದು, ಜೋರಾಗಿ ಮಾತನಾಡುವುದು, ಬ್ಲೂಟೂತ್ ಹಾಕಿ ಜೋರಾಗಿ ಮಾತನಾಡಿದ್ದಾರೆ ಎನ್ನುವ 6520 ಪ್ರಕರಣಗಳು, ತಂಬಾಕು ಸೇವನೆಯಡಿ 641 ಕೇಸ್ ದಾಖಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕಲು ಭಾರೀ ದಂಡಾಸ್ತ್ರ ಪ್ರಯೋಗಕ್ಕೂ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ದಿನದಿಂದ ದಿನಕ್ಕೆ ಮೆಟ್ರೋದಲ್ಲಿ ಮೊಬೈಲ್ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೌಂಡ್ ಕಿರಿಕಿರಿ ಕುರಿತು ಬಿಎಂಆರ್‌ಸಿಎಲ್‌ಗೆ ದೂರಿನ ಸುರಿಮಳೆಯೇ ಆಗುತ್ತಿದೆ. ಮೆಟ್ರೋ ರೈಲಿನಲ್ಲಿ ಮೊಬೈಲ್‌ ಬಳಸುವವರ ವಿರುದ್ದ ಭಾರಿ ದಂಡ ಹೇರುವ ಚರ್ಚೆಯೂ ಸಹ ನಡೆದಿದೆ. ಮೊಬೈಲ್ ಹುಚ್ಚಾಟಕ್ಕೆ ಕಡಿವಾಣ ಹಾಕಲೇಬೇಕು ಎಂದು ನಿರ್ಧರಿಸಿದಂತಿರುವ ಬಿಎಂಆರ್‌ಸಿಎಲ್ ಸ್ವಲ್ಪ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಇರಾದೆಯನ್ನು ಹೊಂದಿದ್ದು, ಇದಕ್ಕೆ ಪರ ವಿರೋಧಗಳೂ ಸಹ ಇದೆ.

ಮೆಟ್ರೋ ರೈಲಿನಲ್ಲಿ ಮೊಬೈಲ್ ಬಳಕೆಯಿಂದ ಜನರು ನಿಯಮ ಮೀರಿ ವರ್ತಿಸುವುದು ಹೆಚ್ಚಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ರೀಲ್ಸ್ ಮಾಡುವುದು, ವಿಡಿಯೋ ಮಾಡುವುದು, ರೈಲು ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಫೋಟೋ ಕ್ಲಿಕ್ಕಿಸುವುದು. ವಿಡಿಯೋ ಮಾಡಿಕೊಳ್ಳುವುದು ನಡೆದಿದ್ದು, ನಿಯಮ ಮೀರಿ ಜನರು ವರ್ತಿಸುತ್ತಿದ್ದಾರೆ. ಮೆಟ್ರೋ ಭದ್ರತಾ ಸಿಬ್ಬಂದಿ ಫೋಟೋ, ವಿಡಿಯೋ ಗ್ರಾಫಿಗೆ ಅವಕಾಶವಿಲ್ಲ ಎಂದು ಸೂಚನೆ ನೀಡಿದರೂ ಕೆಲವರು ಹದ್ದುಮೀರಿ ವರ್ತಿಸುವುದು ನಿಂತಿಲ್ಲ. ಜನರ ಈ ವರ್ತನೆ ಬಿಎಂ ಆರ್‌ಸಿಎಲ್‌ಗೆ ತಲೆನೋವಾಗಿ ಪರಿಣಮಿಸಿದೆ.

ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಬಿಎಂಆರ್ ಸಿಲ್ ಕೆಲ ನಿಯಮಗಳನ್ನು ರೂಪಿಸಿದ್ದ ಎಲ್ಲರೂ ಅದನ್ನು ಪಾಲಿಸುವುದು ಕಡ್ಡಾಯ. ಆದರೆ, ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಗಂಭೀರ ಪ್ರಕರಣಗಳಾದರೆ ಪೊಲೀಸರಿಗೆ ಒಪ್ಪಿಸಿದ ಪ್ರಕರಣಗಳು ಇವೆ.


Share with

Leave a Reply

Your email address will not be published. Required fields are marked *