ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಶ್ರೀಮತಿ ಸ್ನೇಹಲತಾ ದಿವಾಕರ್ ಕುಂಬ್ಳೆ (ಕಾಸರಗೋಡು) ಪ್ರಥಮ, ಶ್ರೀ ಸದಾಶಿವ ಸೊರಟೂರು (ಹೊನ್ನಾಳಿ) ದ್ವಿತೀಯ, ಶ್ರೀಮತಿ ರಂಜಿತಾ ಪಿ.ಆರ್ (ಮೈಸೂರು) ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಶ್ರೀ ಶಿವಕುಮಾರ ಚೆನ್ನಪ್ಪನವರ (ರಾಣಿಬೆನ್ನೂರು), ಶ್ರೀ ಚೌಡಪ್ಪ (ಹಂಪಿ) ಇವರು ಮೆಚ್ಚುಗೆಯ ಬಹುಮಾನವನ್ನು ಗಳಿಸಿದ್ದಾರೆ. ಈ ಬಾರಿ ಒಟ್ಟು 127 ಕವನಗಳು ಬಂದಿದ್ದು ಡಾ.ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಭವ್ಯ ಭಟ್ ಅವರು ತೀರ್ಪುಗಾರರಾಗಿ ಸಹಕರಿಸಿದ್ದಾರೆ.


ಜನ ಸಾಮಾನ್ಯರ ಬದುಕಿನ ನೋವು ನಲಿವುಗಳಿಗೆ ಸ್ಪಂದಿಸುವ, ಸಂಸ್ಕೃತಿಯ ಸೂಕ್ಷ್ಮಗಳನ್ನು ಪ್ರತಿಪಾದಿಸಿದ ಕವಿತೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. ವರದಿಯಾಗಿ, ಘೋಷಣೆಯಾಗಿ ಮತ್ತು ಕೇವಲ ಸ್ವಗತವಾಗಿ ಮೂಡಿಬಂದರೆ ಕವಿತೆ ಎನಿಸಿಕೊಳ್ಳುವುದಿಲ್ಲ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ, ವಾಸ್ತವ ಸತ್ಯವನ್ನು ಒಳಗೊಂಡಿರುವ ಕವಿತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸಾಹಿತ್ಯ ಗಂಗಾ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯಸ್ಥರಾದ ಶ್ರೀ ವಿಕಾಸ ಹೊಸಮನಿ ಅವರು ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




