ಉಡುಪಿ: ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಾಸ್ಸಾಗುತ್ತಿದ್ದ ಬೋಟ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ಮೀನು, ಡೀಸೆಲ್ ಅನ್ನು ಅಪರಿಚಿತ 25 ಮಂದಿಯ ತಂಡವೊಂದು ಸುಲಿಗೆ ಮಾಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ಣನಂದನ ಎಂಬ ಲೈಲಾನ್ ಬೋಟ್ ನಲ್ಲಿ ಫೆ.19ರಂದು ನಾಗರಾಜ್ ಹರಿಕಾಂತ, ನಾಗರಾಜ್ ಹೆಚ್.ಹರಿಕಾಂತ, ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮುಟ, ಕಾರ್ತಿಕ್ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಮಣ್ಯ ಖಾರ್ವಿ ಅವರು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಫೆ.27ರಂದು ಮೀನುಗಾರಿಕೆ ಮುಗಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಬೋಟ್ ಫ್ಯಾನ್ ಗೆ ಬಲೆ ಸಿಲುಕಿಕೊಂಡ ಕಾರಣ ಬೋಟ್ ಬಂದ್ ಆಗಿ ನಿಂತಿತ್ತು.
ಈ ಸಂದರ್ಭದಲ್ಲಿ ಸುಮಾರು 25 ಮಂದಿಯ ತಂಡವೊಂದು ಏಕಾಏಕಿ ದಾಳಿ ಮಾಡಿ ಬೋಟ್ ಅನ್ನು ತೀರಕ್ಕೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಬೋಟ್ ನಲ್ಲಿದ್ದ ಮೀನುಗಾರರನ್ನು ಅಪಹರಿಸಿ, ಸುಮಾರು 8 ಲಕ್ಷ ಮೌಲ್ಯದ ಮೀನು ಹಾಗೂ ಬೋಟ್ ಗೆ ತುಂಬಿಸಿದ 5,76,700 ರೂ. ಮೌಲ್ಯದ 7,500 ಲೀಟರ್ ಡೀಸೆಲ್ ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಚೇತನ್ ಸಾಲಿಯಾನ್ ಅವರು ನೀಡಿರುವ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.