ಉಡುಪಿ: ಜಿಲ್ಲಾಡಳಿತ, ಜಿ.ಪಂ. ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ದೊಡ್ಡಣ್ಣಗುಡ್ಡೆಯಲ್ಲಿರುವ ತೋಟಗಾರಿಕೆ ಇಲಾಖೆ ಪುಷ್ಪ ಹರಾಜು ಕೇಂದ್ರದಲ್ಲಿ ಜನವರಿ 28ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ರಚಿಸಿರುವ ಹೂಗಳ ಕಲಾಕೃತಿಗಳು ಸೌಂದರ್ಯ ಪ್ರಿಯರ ಕಣ್ಮನ ಸೆಳೆಯುತ್ತಿವೆ.
ಜ.26ರಿಂದ ಆರಂಭಗೊಂಡ ಫಲಪುಷ್ಪ ಪ್ರದರ್ಶನದ ಮೊದಲ ದಿನವೇ ಸ್ಥಳೀಯ ಸಹಿತ ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಹೂ, ಹೂವಿನ ಸಸ್ಯ, ಕಲಾಕೃತಿಗಳನ್ನು ಕಣ್ಣುಂಬಿಕೊಂಡರು.
5 ಸಾವಿರಕ್ಕೂ ಅಧಿಕ 30ಕ್ಕೂ ಅಧಿಕ ಜಾತಿಯ ಹೂವಿನ ಗಿಡಗಳಾದ ಪೆಟೂನಿಯ, ವರ್ಬೇನ, ಸ್ಯಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್ ಸೇರಿದಂತೆ ವಿವಿಧ ಜಾತಿಯ ಹೂವಿನ ಗಿಡಗಳು ಪಾತಿ, ಕುಂಡಗಳಲ್ಲಿ ಪ್ರದರ್ಶನದಲ್ಲಿವೆ.
ರಾಗಿ ಮತ್ತು ಹೂವಿನಿಂದ ರೂಪಿಸಲಾದ ಅಯೋಧ್ಯೆ ರಾಮ ಮಂದಿರದ ಕಲಾಕೃತಿ ವಿಶೇಷ ಗಮನ ಸೆಳೆಯುತ್ತಿದೆ. ಇದರ ಜತೆಗೆ ನರ್ಸರಿ ಗಿಡಗಳು, ಕೃಷಿ ಸಂಬಂಧಿತ ಇಲಾಖೆಗಳಾದ ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಪಶುಸಂಗೋಪನೆ, ಕೈಗಾರಿಕೆ ವಾಣಿಜ್ಯ ಇಲಾಖೆ ವಸ್ತು ಪ್ರದರ್ಶನ ಮಳಿಗೆಯೂ ಪ್ರಮುಖವಾಗಿದೆ. ಪ್ರದರ್ಶನ ವೀಕ್ಷಿಸಲು ನೂರಾರು ಜನ ಇಲ್ಲಿಗೆ ಆಗಮಿಸುತ್ತಿದ್ದಾರೆ.