ತುಮಕೂರು, ಜನವರಿ 9: ತುಮಕೂರು (Tumkur) ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಭೀಕರ ಅಪಘಾತ (Accident) ಸಂಭವಿಸಿ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದು, ಇವರಲ್ಲಿ ಒಬ್ಬ ಬಾಲಕಿ ಕೂಡ ಸೇರಿದ್ದಾಳೆ. ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಇವರೇ ಮೃತ ದುರ್ದೈವಿಗಳು. ಗಾಯಾಳುಗಳು ಪ್ರಶಾಂತ್ (32), ಪ್ರವೀಣ್ ಕುಮಾರ್ (28), ರಾಜಪ್ಪ (45), ಉಲಗಪ್ಪ (32), ರಾಕೇಶ್ (24) ತಿರುಪತಿ (33), ಶ್ರೀನಿವಾಸ್ (32) ಎಂದು ತಿಳಿದುಬಂದಿದೆ.
ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೂಸರ್ನಲ್ಲಿ ಒಟ್ಟು 12 ಮಂದಿ ಪ್ರಯಾಣ ಮಾಡುತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮಗಳ ಕಳೆದುಕೊಂಡು ತಂದೆ ಉಲಗಪ್ಪ ಕಣ್ಣೀರು
ಅಪಘಾತದಲ್ಲಿ ಮಗಳನ್ನು ಕಳೆದುಕೊಂಡು ಆಕೆಯ ತಂದೆ ಉಲಗಪ್ಪ ಕಣ್ಣೀರು ಹಾಕುತ್ತಿದ್ದಾರೆ. ಸಾಕ್ಷಿ ನನ್ನ ಮಗಳು. ಶಬರಿ ಮಲೆಗೆ 5 ರಂದು ತೆರಳಿದ್ದೆವು. ದೇವರ ದರ್ಶನ ಮಾಡಿಕೊಂಡು ವಾಪಾಸ್ ಆಗುತಿದ್ದೆವು. ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು. ಅಪಘಾತ ಹೇಗಾಯಿತು ಎಂದು ಗೊತ್ತಿಲ್ಲ. ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ನಾವು 11 ಜನ ಪ್ರಯಾಣ ಮಾಡುತಿದ್ದೆವು. 10 ಜನ ಅಕ್ಕಪಕ್ಕದ ಊರಿನ ನಾವು ಒಟ್ಟಿಗೆ ಮಾಲೆ ಹಾಕಿದ್ದೆವು. ಒಟ್ಟಾಗಿ ಶಬರಿ ಮಲೆಗೆ ತೆರಳಿದ್ದೆವು. ಕಾರು ಚಾಲಕ ಸೇರಿ 11 ಜನ ಪ್ರಯಾಣ ಮಾಡುತಿದ್ದೆವು. ನನ್ನ ಮಗಳು ಒಂದನೇ ತರಗತಿ ಓದುತಿದ್ದಳು. ಎರಡನೇ ಬಾರಿ ಶಬರಿ ಮಾಲೆಗೆ ಕರೆದೊಯ್ದಿದ್ದೆವು. ಒಳ್ಳೆಯದಾಗಲಿ ಎಂದು ದೇವರ ದರ್ಶನ ಮಾಡಿ ವಾಪಾಸ್ ಆಗುತಿದ್ದೆವು. ಹೀಗಾಗಿದೆ ಎಂದು ಉಲಗಪ್ಪ ಕಣ್ಣೀರು ಹಾಕಿದ್ದಾರೆ.
ಹುಲಿಗಪ್ಪ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 5 ರಂದು ಶಬರಿಮಲೆಗೆ ತೆರಳಿದ್ದ ಮಾಲಾಧಾರಿಗಳು 7 ರಂದು ತಲುಪಿದ್ದರು. ಬುಧವಾರ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಪಡೆದಿದ್ದ ಮಾಲಾಧಾರಿಗಳು ಗುರುವಾರ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಮಧ್ಯಾಹ್ನ ತಮಿಳುನಾಡಿನ ಪಳನಿಯಿಂದ ಬೆಂಗಳೂರು ಕಡೆಯಿಂದ ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ.





