ಮಂಗಳೂರು: ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಹೆಸರಲ್ಲಿ 25 ಲಕ್ಷ ರೂಪಾಯಿ ಗೆದ್ದಿರುವುದಾಗಿ ಹೇಳಿಕೊಂಡು ಪುತ್ತೂರಿನ ಮಹಿಳೆಗೆ 12.93 ಲಕ್ಷ ರೂಪಾಯಿಗಳನ್ನು ವಂಚಿಸಿದ ಘಟನೆ ನಡೆದಿದೆ.
ಪುತ್ತೂರಿನ ಝೀನತ್ ಬಾನು ಎಂಬುವವರಿಗೆ 2022ನೇ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ ಕರೆಯನ್ನು ಮಾಡಿ ತಾನು ಕೌನ್ ಬನೇಗಾ ಕರೋಡ್ ಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದು ಹಾಗೂ ನೀವು 25 ಲಕ್ಷ ರೂಪಾಯಿಯ ಲಾಟರಿ ಗೆದ್ದಿರುವುದಾಗಿ ತಿಳಿಸಿರುತ್ತಾನೆ.
ಅನಂತರ ಆ ಹಣವನ್ನು ಪಡೆಯಲು ತೆರಿಗೆ ಹಾಗೂ ಇತರ ಶುಲ್ಕಗಳ ಕಾರಣವನ್ನು ಹೇಳಿ 2022 ಮೇ ತಿಂಗಳಿನಿಂದ 2023 ಸೆಪ್ಟೆಂಬರ್ 13ರ ವರೆಗೆ ವಿವಿಧ ಬ್ಯಾಂಕ್ ಖಾತೆಗೆ 12,93,200 ರೂಪಾಯಿಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.