ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ದೇಶದ 80 ಕೋಟಿ ಜನತೆಗೆ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ವಿತರಿಸುತ್ತಾ ಬಂದಿದೆ. ಆ ಮೂಲಕ ಮೋದಿ ಅಕ್ಷಯ ಪಾತ್ರೆಯಿಂದ ಜನತೆಗೆ ಉಚಿತ ಅಕ್ಕಿ ದೊರೆತಂತಾಗಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ 10 ಕೆ.ಜಿ. ಉಚಿತ ‘ಅಕ್ಕಿ ಬೇಕೋ ಬೇಡ್ವೊ’ ಎಂದು ಪುಂಗಿ ಊದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಂದು ಕಾಳು ಅಕ್ಕಿಯನ್ನೂ ನೀಡದೆ ಜನತೆಗೆ ಖಾಲಿ ಚೊಂಬು ನೀಡಿ ದ್ರೋಹವೆಸಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಉಡುಪಿ ನಗರ ಚುನಾವಣಾ ನಿರ್ವಹಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಗ್ರಾಮ ಪಂಚಾಯತ್ ಮಟ್ಟದಿಂದ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದವರೆಗೆ ಬೆಳೆದು ಬಂದ ಸನ್ನಿವೇಶದಲ್ಲಿ ಸಚಿವರಾಗಿ ಮುಜರಾಯಿ, ಮೀನುಗಾರಿಕೆ, ಬಂದರು, ಒಲನಾಡ ಜಲ ಸಾರಿಗೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಮಾಡಿರುವ ಜನಪರ ಕಾರ್ಯಗಳ ಸಾಧನೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇoದ್ರ ಸರಕಾರದ ಐತಿಹಾಸಿಕ ಸಾಧನೆಗಳನ್ನು ಜನತೆಯ ಮುಂದಿಟ್ಟು ಮತ ಕೇಳಿದರೆ, ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಸರಕಾರದ ಅವಧಿಯ ಸಾಧನೆಗಳನ್ನೇ ತನ್ನ ಸಾಧನೆ ಎಂಬಂತೆ ಬಿಂಬಿಸುತ್ತಾ, ಬಿಜೆಪಿ ಅಭ್ಯರ್ಥಿಯ ತೇಜೋವಧೆಗೈಯುತ್ತಾ ಬಿಟ್ಟಿ ಪ್ರಚಾರ ಪಡೆಯಲು ವಿಫಲ ಯತ್ನ ನಡೆಸುತ್ತಿರುವುದು ಶೋಚನೀಯ ಎಂದು ಅವರು ತಿಳಿಸಿದರು.
ಸಾಮಾನ್ಯ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಬಡ ಹಾಗೂ ಶೋಷಿತ ವರ್ಗದ ಕಷ್ಟ ಕಾರ್ಪಣ್ಯಗಳನ್ನು ಚೆನ್ನಾಗಿಯೇ ಅರಿತಿದ್ದಾರೆ. ಸಚಿವರಾಗಿದ್ದ ಸಂದರ್ಭದಲ್ಲಿ ಎಸ್.ಸಿ., ಎಸ್.ಟಿ. ಸಮುದಾಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೈಗೊಂಡ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ಜನ ಮೆಚ್ಚುಗೆಗೆ ಪಾತ್ರವಾಗಿವೆ. ಮುಜರಾಯಿ ಇಲಾಖೆಯ ಮೂಲಕ ಅನೇಕ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಗರೋಡಿಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿರುವುದು, ಮೀನುಗಾರಿಕಾ ಇಲಾಖೆಯ ಮೂಲಕ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಪ್ರಶಂಸೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯ ವೈಖರಿ ಮತ್ತು ಸಾಧನೆಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಸಾಮಾನ್ಯ ಜನರೊಂದಿಗೂ ಬೆರೆತು ಎಲ್ಲರನ್ನೂ ಸಮಭಾವದಲ್ಲಿ ಕಾಣುವ ಮಾದರಿ ಜನ ನಾಯಕ ಕೋಟ ದಾಖಲೆಯ ಅಂತರದ ಮತಗಳಿಂದ ವಿಜಯಶಾಲಿಯಾಗುವುದು ಶತಸಿದ್ಧ ಎಂದು ಯಶ್ಪಾಲ್ ಸುವರ್ಣ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ವಿಧಾನಸಭಾ ಕ್ಷೇತ್ರ ಚುನಾವಣಾ ಸಂಚಾಲಕ ಗಿರೀಶ್ ಎಮ್. ಅಂಚನ್, ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.