ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಗಡಿನಾಡ ಕವಿ ಭಾವಸಂಗಮ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಕವಿಗೋಷ್ಠಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಸಮಾಜದ ಒಳಿತು ಕೆಡುಕುಗಳ ಮೇಲೆ ಸಾಹಿತ್ಯ ಅಗಾಧ ಪರಿಣಾಮ ಬೀರುತ್ತದೆ. ಉತ್ತಮ ಸಾಹಿತ್ಯ ಸಾರ್ವಕಾಲಿಕವಾಗಿ ಜನಮಾನಸದಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದತ್ತ ಚಿತ್ತ ಹರಿಸಬೇಕೆಂದು ತಿಳಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಸಾಹಿತಿ ಬಾಲಕೃಷ್ಣ ಬೇರಿಕೆ ಮಾತನಾಡಿ ನಿರಂತರ ಪರಿಶ್ರಮ, ಆಸಕ್ತಿ, ಅಧ್ಯಯನ, ಮಹಾನ್ ಕವಿಗಳ ಸಾಹಿತ್ಯ ಮಂಥನ ಭವಿಷ್ಯದ ಸಾಹಿತಿಗಳಿಗೆ ಪ್ರೇರಕವಾಗಿದೆ. ಶ್ರದ್ಧಾಕೇಂದ್ರಗಳಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಾಗ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಸಾಧ್ಯವಿದೆ ಎಂದರು.
ನಾರಾಯಣ ನಾಯ್ಕ ಕುದುಕ್ಕೊಳಿ, ವಿಷ್ಣುಗುಪ್ತ ಪುಣಚ, ವನಜಾಕ್ಷಿ ಚಂಬ್ರಕಾನ, ಸುಶ್ಮಿತಾ ಕುಕ್ಕಾಜೆ, ದೀಕ್ಷಿತ್ ಮಾಣಿಲ, ಅನುರಾಧ ಪಳನೀರು, ನವ್ಯಶ್ರೀ ಕಾಮಜಾಲು ಕವನ ವಾಚಿಸಿದರು. ಯುವ ಸಾಹಿತಿ ಉದಯ ಭಾಸ್ಕರ್ ಸುಳ್ಯ, ಕವಯತ್ರಿ ಸುಜಾತ ಮಾಣಿಮೂಲೆ ಕವನಗಳ ವಿಮರ್ಶೆ ನಡೆಸಿದರು.
ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಹಿರಿಯ ಸಾಹಿತಿ ಸುಂದರ ಬಾರಡ್ಕ ಭಾಗವಹಿಸಿದರು. ದೇವಿಪ್ರಸಾದ್ ಕುಕ್ಕಾಜೆ ಸ್ವಾಗತಿಸಿದರು. ರವಿ ಎಸ್.ಎಂ ವಂದಿಸಿದರು. ಸಾಹಿತಿ ಜಯ ಮಣಿಂಯಪಾರೆ ಕಾರ್ಯಕ್ರಮ ನಿರೂಪಿಸಿದರು.