ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಗೋ ಗ್ಯಾಸ್ ಕಂಪೆನಿಯ ಅಟೋ ಗ್ಯಾಸ್ ಪಂಪ್‌ನಲ್ಲಿ ಗ್ಯಾಸ್ ದರವನ್ನು ಕೆ.ಜಿ.ಗೆ ರೂ. 120ಕ್ಕೆ ಏರಿಸಿರುವುದನ್ನು ವಿರೋಧಿಸಿ ಪುತ್ತೂರು ತಾಲೂಕು ಅಟೋ ಚಾಲಕ -ಮಾಲಕರ ಸಂಯುಕ್ತ ಹೋರಾಟ ಸಮಿತಿಯಿಂದ ಏ.6ರಂದು ಪಂಪ್ ಎದುರುಗಡೆ ಪ್ರತಿಭಟನೆ ನಡೆಸಿ ಬಳಿಕ ಶಾಸಕರಿಗೆ ಮನವಿ ನೀಡಲಾಯಿತು. ಪಂಪ್ ಮಾಲಕರುಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ರಿಕ್ಷಾ ಚಾಲಕರಿಗೆ ಭರವಸೆ ನೀಡಿದ್ದಾರೆ.

ಯುದ್ಧದ ಪರಿಣಾಮ ಅಟೋ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವ ಹಿನ್ನಲೆಯಲ್ಲಿ ಹಲವು ಅಟೋ ಗ್ಯಾಸ್ ಪಂಪ್‌ಗಳಲ್ಲಿ ದರ ಏರಿಕೆ ಆಗಿದ್ದು ಅಟೋ ಚಾಲಕ-ಮಾಲಕರು ಕಂಗೆಟ್ಟಿದ್ದಾರೆ. ಪುತ್ತೂರಿನಲ್ಲಿ ಕೆಲವೇ ಪಂಪ್‌ಗಳಲ್ಲಿ ಮಾತ್ರ ಗ್ಯಾಸ್ ವಿತರಣೆ ಆಗುತ್ತಿರುವುದರಿಂದ ಅಟೋ ಚಾಲಕರು ಬಿಸಿಲಲ್ಲಿ ಸರದಿ ಸಾಲಿನಲ್ಲಿ ಬಂದು ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದರು. ಇದರ ಬೆನ್ನಲ್ಲೇ ಪುತ್ತೂರಿನ ಮಹಿಳಾ ಠಾಣೆಯ ಎದುರುಗಡೆ ಇರುವ ಗೋ ಗ್ಯಾಸ್ ಕಂಪನಿಯ ಅಟೋ ಗ್ಯಾಸ್ ಪಂಪ್‌ನಲ್ಲಿ ಕೆ.ಜಿ.ಗೆ 62 ರೂ. ಇದ್ದ ಗ್ಯಾಸ್ ದರವನ್ನು 120 ರೂ.ಗೆ ಏರಿಸಿರುವುದನ್ನು ವಿರೋಧಿಸಿ ಪುತ್ತೂರು ತಾಲೂಕು ಅಟೋ ಚಾಲಕ – ಮಾಲಕರ ಸಂಯುಕ್ತ ಹೋರಾಟ ಸಮಿತಿಯಿಂದ ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು.
ಸುಮಾರು 200ರಷ್ಟು ರಿಕ್ಷಾ ಚಾಲಕರು, ಮಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.




