ಪೋಷಕರು ಬೈದಿದ್ದಕ್ಕೆ ಬಸ್ ಫ್ರೀ ಎಂದು ತಮ್ಮನ ಜೊತೆ ಮನೆಬಿಟ್ಟು ಹೋಗಿ ಊರೂರು ಸುತ್ತಿದ ಬಾಲಕಿ

Share with

ಬೆಂಗಳೂರು, ಫೆಬ್ರವರಿ 04: ದುಡಿಯುವ, ಬಡ ಮಹಿಳೆಯರಿಗೆ ಅನುಕೂಲವಾಗಲೆಂದು ಸಾಮಾನ್ಯ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಆದ್ರೆ ಇದೇ ಯೋಜನೆಯಿಂದ ಕುಟುಂಬವೊಂದು ಕಂಗಾಲಾಗಿರುವ ಅಚ್ಚರಿಯ ಘಟನೆ ಬೆಂಗಳೂರಲ್ಲಿ ನಡೆದಿದೆ. ಟ್ಯೂಷನ್ ಗೆ ಹೋಗಲ್ಲ ಎಂದು ಮಕ್ಕಳಿಗೆ ಪೋಷಕರು ಬೈದ ಕಾರಣ 13 ವರ್ಷದ ಬಾಲಕಿಯೋರ್ವಳು ತನ್ನ 9 ವರ್ಷದ ತಮ್ಮನ ಜೊತೆ ಫ್ರೀ ಬಸ್ನಲ್ಲಿ ಊರೂರು ಸುತ್ತಿದ್ದಾಳೆ. ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ತೆರಳಿದ್ದ ಅಕ್ಕ-ತಮ್ಮ ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಓಡಾಡಿದ್ದು, ಪೊಲೀಸರ ಸಹಕಾರದಿಂದ ಮಕ್ಕಳು ಅಂತಿಮವಾಗಿ ಮರಳಿ ಹೆತ್ತವರ ಮಡಿಲು ಸೇರಿರುವ ಪ್ರಸಂಗ ನಡೆದಿದೆ.

ಹೌದು, ಹೆತ್ತವರು ಬೈದಿದ್ದಕ್ಕೆ ಕೋಪಗೊಂಡ ಮಕ್ಕಳು ಮನೆಬಿಟ್ಟು ತೆರಳಿದ್ದಾರೆ. ಆಧಾರ್ ಕಾರ್ಡ್ ಇರೋದ್ರಿಂದ ಸರ್ಕಾರಿ ಬಸ್ಗಳಲ್ಲಿ ಬಾಲಕಿಗೆ ಉಚಿತವಾಗಿ ಪ್ರಯಾಣಿಸಿದ್ದರೆ, ತಮ್ಮನಿಗೆ ಟಿಕೆಟ್ ಮಾಡದೆ ಕರೆದೊಯ್ದಿದ್ದಳು. ಇತ್ತ ಮಕ್ಕಳು ಕಾಣೆಯಾಗಿರುವ ಬಗ್ಗೆ ಆತಂಕಗೊಂಡ ಪೋಷಕರು ಅವರಿಗಾಗಿ ಹುಡುಕಾಡಿದ್ದಾರೆ. ಬಳಿಕ HAL ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಿಸಿದ್ದಾರೆ. ತಕ್ಷಣ ಅಲರ್ಟ್ ಆದ ಪೊಲೀಸರು ಈ ಬಗ್ಗೆ ರಾಜ್ಯಾದ್ಯಂತ ಪೊಲೀಸರಿಗೆ ಮಾಹಿತಿ ನೀಡುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಮಕ್ಕಳ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ನಡೆಸಿದಾಗ ಅಶ್ವತ್ಥನಗರ ಮನೆಯಿಂದ ಬ್ಯಾಗ್ ಹಿಡಿದು ಹೊರಟಿದ್ದ ಮಕ್ಕಳು ಮಾರತ್ತಹಳ್ಳಿ ಬ್ರಿಡ್ಜ್ ಸ್ಕೈ ವಾಕ್ ಹತ್ತಿ ಬಂದಿದ್ದಾರೆ. ಅಲ್ಲಿಂದ ಮೆಜೆಸ್ಟಿಕ್ಗೆ ಬಂದು ನೇರವಾಗಿ‌ ಶಿವಮೊಗ್ಗಗೆ ತೆರಳಿದ್ದಾರೆ ಎಂಬುದು ಗೊತ್ತಾಗಿದೆ. ಹೀಗೆ ಬಸ್ ಹತ್ತಿಹೋದ ಇವರು ಭದ್ರವಾತಿಯಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಸಂದೇಶ ನೋಡಿ ಪೊಲೀಸರಿಗೆ ಕರೆ ಬಂದಿದೆ. ಫೋಟೊದಲ್ಲಿರುವ ಮಕ್ಕಳ ರೀತಿಯಲ್ಲೇ ಕಾಣುವ ಇಬ್ಬರು ಇಲ್ಲಿದ್ದಾರೆಂಬ ಮಾಹಿತಿ ಸಿಕ್ಕ ಕಾರಣ ವಿಷಯವನ್ನು HAL ಪೊಲೀಸರು ಸ್ಥಳೀಯ ಠಾಣೆಗೆ ತಿಳಿಸಿದ್ದಾರೆ. ಅವರು ಮಕ್ಕಳನ್ನು ರಕ್ಷಿಸಿದ್ದು, ಭದ್ರಾವತಿತಿಂದ ಹೆಚ್ಎಎಲ್ ಠಾಣೆಗೆ ಮನೆಬಿಟ್ಟು ತೆರಳಿದ್ದ ಅಕ್ಕ ಮತ್ತು ತಮ್ಮನನ್ನು ಕರೆತರಲಾಗಿದೆ.


Share with

Leave a Reply

Your email address will not be published. Required fields are marked *