ನಮ್ಮ ಚಿನ್ನ ನಮಗೆ ಮರಳಿಸಿ: ಗ್ರಾಹಕರ ಆಗ್ರಹ

Share with

ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ದರೋಡೆ ನಡೆದ ಮಾಹಿತಿ ಪಡೆದು ಗ್ರಾಹಕರು ಶನಿವಾರ ಸಂಘದ ಕಚೇರಿಯತ್ತ ಧಾವಿಸಿದ್ದರು. ಅಡಮಾನ ಇಟ್ಟಿದ್ದ ಚಿನ್ನ ಕಳವಾಗಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ಗ್ರಾಹಕರು ‘ನಮ್ಮ ಚಿನ್ನ ನಮಗೆ ಮರಳಿಸಿ’ ಎಂದು ಒತ್ತಾಯಿಸಿದರು. ಸಂಘದ ಕಚೇರಿಯಲ್ಲಿ ಭದ್ರತಾ ಲೋಪದ ಬಗ್ಗೆ ಆಕ್ರೋಶ ಹೊರಹಾಕಿದರು.

ಚಿನ್ನ ಅಡವಿಟ್ಟಿರುವ ಮಹಿಳೆಯರು ಹಾಗೂ ಗ್ರಾಹಕರು ಬೆಳಗ್ಗಿನ ಸಮಯದಲ್ಲಿ ಸಂಘದ ಕಚೇರಿ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕಚೇರಿಯಲ್ಲಿ ಮಹಜರು ನಡೆಯುತ್ತಿದ್ದ ಕಾರಣ ಗ್ರಾಹಕರು ಒಳ ಪ್ರವೇಶಿಸುವುದಕ್ಕೆ ಪೊಲೀಸ್‌ ಸಿಬ್ಬಂದಿ ಅವಕಾಶ ನೀಡಲಿಲ್ಲ. ಈ ವೇಳೆ ಸ್ಥಳದಲ್ಲಿ ಸೇರಿದ್ದ ಗ್ರಾಹಕರ ಗುಂಪುಗಳ ಮಧ್ಯೆ ವಾಗ್ವಾದವೂ ನಡೆಯಿತು. ವಾಗ್ವಾದವು ಕೈಕೈ ಮಿಲಾಯಿಸುವ ಹಂತದವರೆಗೆ ಹೋದಾಗ ಪೊಲೀಸರು ಮಧ್ಯಪ್ರವೇಶ ಮಾಡಿದರು.

ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು, ಮನೆ ಖರೀದಿಗೆ ವಿವಿಧ ಕಾರಣಗಳಿಗಾಗಿ ಚಿನ್ನ ಅಡವಿಟ್ಟು ಹಣ ಪಡೆದಿದ್ದೇವೆ. ಕಳೆದ ಸಲ ಇದೇ ಸಂಘದಲ್ಲಿ ಚಿನ್ನ ಕಳವಾಗಿದ್ದಾಗಲೂ ನಮಗೆ ಪರಿಹಾರ ನೀಡಿಲ್ಲ. ಈ ಬಾರಿ ಅದೇ ರೀತಿ ಆಗಬಾರದು’ ಎಂದು ಆಗ್ರಹಿಸಿದರು.

ಸಹಕಾರಿ ಸಂಘದ ಉದ್ಯೋಗಿ ವಾಣಿ ಎಲ್. ಅವರು ದರೋಡೆಯ ಕುರಿತು ದೂರು ನೀಡಿದ್ದು ಉಳ್ಳಾಲ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ


Share with