ಕಾಸರಗೋಡು : ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್(ರಿ), ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್ ಮತ್ತು ಮುಂಬಯಿಯ ದಿನೇಶ್ ಬಾಹ್ರಾ ಫೌಂಡೇಶನ್ ಸಹಯೋಗದಲ್ಲಿ ಪಶುಪಾಲನೆಯವರಿಗಾಗಿ ಹೋಮಿಯೋಪತಿ ಪ್ರಥಮ ಚಿಕಿತ್ಸೆ ಮತ್ತು ಮಾಹಿತಿ ಶಿಬಿರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಡಿ.10 ಜರಗಿತು. ಮಂಗಳೂರಿನ ಖಾಸಗಿ ಪಶುವೈದ್ಯ ಡಾ. ಮನೋಹರ ಉಪಾಧ್ಯಾಯ ಸಂಪನ್ಮೂಲ ವ್ಯಕ್ತಿಗಳಾಗಿ ‘ಹೋಮಿಯೋಪತಿ ಚಿಕಿತ್ಸೆ ಗೋವುಗಳಿಗೆ ಯಾವ ರೀತಿ ಕಡಿಮೆ ಖರ್ಚಿನಲ್ಲಿ ಉತ್ತಮ ಉಪಯೋಗಿಕಾರಿಯಾಗಿದೆ’ ಎಂದು ವಿವರವಾಗಿ ಮಾಹಿತಿ ನೀಡಿದರು.
ಪೂಜ್ಯಶ್ರೀಗಳು ತಮ್ಮ ಆಶೀರ್ವಚನದಲ್ಲಿ “ಗೋವಿನ ಹಾಲು ಸೇವಿಸಿ ಬೆಳೆಯುವ ನಾವು ಅದರ ಪಾಲನೆ-ಪೋಷಣೆ ಮಾಡಬೇಕು. ಈ ವೈದ್ಯರು ತಿಳಿಸಿದ ಮಾಹಿತಿಯನ್ನು ನಾವು ಬಳಸಿ ಗೋವಿನ ನೋವನ್ನು ಗುಣಪಡಿಸಿ ಧನ್ಯರಾಗೋಣ”ಎಂದರು. ಕಾಮದುಘಾ ಟ್ರಸ್ಟ್‌ನ ಅಧ್ಯಕ್ಷ, ಬದಿಯಡ್ಕದ ಖಾಸಗಿ ಪಶುವೈದ್ಯ ಡಾ.ವೈ.ವಿ. ಕೃಷ್ಣಮೂರ್ತಿಯವರು ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಸರಗೋಡು ಜಿಲ್ಲೆಯ ನಿವೃತ್ತ ಪಶುವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಲಾಡರವರು ಉಪಸ್ಥಿತರಿದ್ದರು.
ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ, ಶ್ರೀ ಸದಾಶಿವ ಮೋಂತಿಮಾರು ಸ್ವಾಗತಿಸಿ, ಶ್ರೀ ದಿನಕರ ಹೊಸಂಗಡಿ ವಂದನಾರ್ಪಣೆಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಗಂಗಾಧರ ಕೊಂಡೆವೂರು ನೆರವೇರಿಸಿದರು.