ಮೆಪ್ಪಾಡಿ: ಕೇರಳದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಧಾರಾಕಾರ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯಾರದ್ದೋ ಮಗುವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಜಿತಾ ಎಂಬ ಮಹಿಳೆ ತನ್ನ ಸ್ವಂತ ಮಗಳನ್ನು ಕಳೆದುಕೊಂಡಿದ್ದಾರೆ. ಪ್ರವಾಹದ ನೀರಿನಲ್ಲಿ ಸಿಲುಕಿದ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಪ್ರಜಿತಾ ಅವರ 10 ವರ್ಷದ ಮಗಳು ಅಹನ್ಯಾಗೆ ಕರೆಂಟ್ ಹೊಡೆದು ಸಾವನ್ನಪ್ಪಿದ್ದಾಳೆ. ಅಹನ್ಯಾಳನ್ನು ಎಳೆಯಲು ಹೋದ ಪ್ರಜಿತಾ ಕುಟುಂಬಸ್ಥರಿಗೂ ಗಾಯಗಳಾಗಿವೆ.
ಪ್ರಜಿತಾ, ಆಕೆಯ ತಾಯಿ ಶೋಭಾ ಹಾಗೂ ಆಕೆಯ ಮಾವ ಗಂಭೀರವಾಗಿ ಗಾಯಗೊಂಡು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಜಿತಾ ಅವರ ಮುಖ ಮತ್ತು ತೊಡೆಯ ಮೂಳೆಗೆ ತೀವ್ರ ಗಾಯಗಳಾಗಿವೆ. ಶೋಭಾ ಅವರ ಪಕ್ಕೆಲುಬಿಗೆ ಕೂಡ ಗಾಯವಾಗಿದೆ.
ಪ್ರಜಿತಾ ಅವರ ಮನೆ ಮತ್ತು ಪಕ್ಕದ ಹೋಂಸ್ಟೇ ಚೂರಲ್ಮಲಾ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹಿಂದೆ ಇತ್ತು. ಸುರಕ್ಷಿತ ವಲಯ ಎಂದು ಪರಿಗಣಿಸಲ್ಪಟ್ಟಿದ್ದ ಚೂರಲ್ಮಲಾದ ಸ್ಥಳದಲ್ಲಿಯೇ ಈ ದುರಂತ ಸಂಭವಿಸಿದೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಚೂರಲ್ಮಲಾ ಮತ್ತು ಮುಂಡಕಾಯಮ್ನ ಎತ್ತರದ ಪ್ರದೇಶದ ಎಲ್ಲ ಜನರು ಈ ಶಾಲೆಯಲ್ಲಿ ವಾಸವಾಗಿದ್ದರು. ಇದು ಈ ಪ್ರದೇಶದ ಅತ್ಯಂತ ಸುರಕ್ಷಿತ ಸ್ಥಳವೂ ಆಗಿತ್ತು. ಇಲ್ಲಿ ಇಂತಹ ಅನಾಹುತ ಸಂಭವಿಸುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.