ಜಾತಿ ಗಣತಿ ಮಾಡುವ ಶಿಕ್ಷಕರಿಗೆ ಸಂಭಾವನೆಗೆ 60 ಕೋಟಿ ರೂ. ಸರ್ಕಾರ ಬಿಡುಗಡೆ! ಪ್ರತಿ ಮನೆ ಸಮೀಕ್ಷೆಗೆ ಎಷ್ಟು ಗೌರವಧನ?

Share with

ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ 1,20,728 (ಜಿಬಿಎ ಹೊರತುಪಡಿಸಿ) ಸಮೀಕ್ಷಕರಿಗೆ ಮೊದಲ ಕಂತಿನ ರೂಪದಲ್ಲಿ ತಲಾ 5000 ರೂ. ಗೌರವಧನ ಮೊತ್ತವಾಗಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಒಟ್ಟು 60,36,40,000 ರೂ. ಬಿಡುಗಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆಪ್ಟೆಂಬರ್ 22 ರಿಂದ ಆರಂಭಿಸಿರುವ ಸಮೀಕ್ಷೆಯಲ್ಲಿ ಒಟ್ಟು 1.20 ಲಕ್ಷ ಸಮೀಕ್ಷಕರು ಪಾಲ್ಗೊಂಡಿದ್ದಾರೆ. ಸಮೀಕ್ಷಾದಾರರಿಗೆ 5000 ರೂ. ಜತೆಗೆ ಪ್ರತಿ ಮನೆ ಸಮೀಕ್ಷೆಗೆ 100 ರೂ. ಹಾಗೂ ಮೇಲ್ವಿಚಾರಕರಿಗೆ 10,000 ರೂ. ಗೌರವ ಸಂಭಾವನೆ ನಿಗದಿಪಡಿಸಲಾಗಿದೆ. 

ಮೊದಲ ಕಂತಿನಲ್ಲಿ 60.36 ಕೋಟಿ ರೂ. ಗಳನ್ನು ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆ/ ಬ್ಯಾಂಕ್‌ ಖಾತೆಗೆ ಬಿಡುಗಡೆಗೊಳಿಸಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್‌ ಆದೇಶ ಹೊರಡಿಸಿದ್ದಾರೆ.

ಅನುದಾನ ಬಳಕೆಗೆ ಎರಡು ನಿಬಂಧನೆಗಳನ್ನು ವಿಧಿಸಲಾಗಿದೆ. ಅನುದಾನವನ್ನು ಸಮೀಕ್ಷಾದಾರರಿಗೆ ತಲಾ 5000 ರೂ.ನಂತೆ ಮೊದಲ ಕಂತಿನ ಗೌರವಧನ ನೀಡಲು ಬಳಸಬೇಕು. ಉಳಿದ ಅನುದಾನವನ್ನು ಮುಂದಿನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಸಮೀಕ್ಷೆಗೆ ಸಂಬಂಧಪಟ್ಟಂತೆ ಬಿಡುಗಡೆ ಮಾಡಲಾದ ಅನುದಾನ, ವೆಚ್ಚದ ವಿವರವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು ಹಾಗೂ ನಿಯಮಾನುಸಾರ ವೆಚ್ಚಗಳನ್ನು ಭರಿಸಿದ ನಂತರ ಹಣ ವಿನಿಯೋಗ ಪ್ರಮಾಣ ಪತ್ರವನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.


Share with

Leave a Reply

Your email address will not be published. Required fields are marked *