ಹಿರಿಯ ನಟಿ ಲೀಲಾವತಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಸಿಎಂ ಸಿದ್ದರಾಮಯ್ಯ

Share with

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ವಿನೋದ್‌ ರಾಜ್‌ ರವರು ತಾಯಿಯ ಆರೈಕೆಯನ್ನು ಮಾಡುತ್ತಿದ್ದಾರೆ. ಕಳೆದೆರಡು ತಿಂಗಳಿನಿಂದ ಚಿತ್ರರಂಗದ ಹಿರಿಯ ನಟರು, ಸ್ಟಾರ್ ನಟರು, ಕಲಾವಿದರು, ತಂತ್ರಜ್ಞರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.

ನಟ ಶಿವರಾಜ್ ಕುಮಾರ್ ಭೇಟಿಯಾಗಿ ಬಂದ ಎರಡು ದಿನಗಳ ಬಳಿಕ ಡಿ. 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲದೇವನಹಳ್ಳಿಯಲ್ಲಿರುವ ಅವರ ತೋಟದ ಮನೆಗೆ ಭೇಟಿ ಮಾಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಲೀಲಾವತಿ ಅವರಿಗೆ ಚಿಕಿತ್ಸೆಯ ಅಗತ್ಯ ಕಂಡುಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಲೀಲಾವತಿಯವರು ಆರೋಗ್ಯವಂತರಾಗಿದ್ದಾಗ ಜಮೀನು ವಿಚಾರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಭೇಟಿಯಾಗುತ್ತಿದ್ದರು. ಈಗ ವಯೋಸಹಜವಾಗಿ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರು ಒಬ್ಬ ನೈಜ ಪ್ರತಿಭೆಯ ಕಲಾವಿದೆ. ವಿನೋದ್ ರಾಜ್ ಕೂಡ ತಾಯಿಯನ್ನು ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ. ಸರ್ಕಾರದಿಂದ ಏನೇ ಸಹಾಯದ ಅಗತ್ಯವಿದ್ದರು ಅದನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಸದ್ಯಕ್ಕೆ ಅವರಿಗೆ ಟ್ಯೂಬ್ ಸಹಾಯದಿಂದ ದ್ರವಆಹಾರವನ್ನು ನೀಡಲಾಗುತ್ತಿದೆ. ಕಳೆದೆರಡು ದಿನಗಳ ಹಿಂದೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಲೀಲಾವತಿ ಅವರ ನೀವಾಸಕ್ಕೆ ಭೇಟಿ ನೀಡಿದ್ದರು. ಜೊತೆಗೆ ದರ್ಶನ್ ತೂಗುದೀಪ, ಬಹುಭಾಷಾ ನಟ ಅರ್ಜುನ್ ಸರ್ಜಾ, ಅಭಿಷೇಕ್ ಅಂಬರೀಶ್ ಸಹ ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದರು.

ಲೀಲಾವತಿ ಹಾಗೂ ವಿನೋದ್ ರಾಜ್ ಭೇಟಿ ಮಾಡಿದ ಬಳಿಕ ನಟ ಶಿವರಾಜ್‌ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ, ಈ ವಯಸ್ಸಿನಲ್ಲಿ ಇದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ ಯಾರಿಗೂ ಇರಲ್ಲ. ಯೋಗಪುರುಷರು ಅಂತಾರೆ. ಅದಕ್ಕೆ ಲೀಲಾವತಿಯವರು ಅಷ್ಟು ಶಕ್ತಿಯಿಂದ ತಡೆದುಕೊಂಡಿದ್ದಾರೆ. ಆಗಿನ ಕಾಲದವರು ಬಹಳ ಸ್ಟ್ರಾಂಗ್ ಆಗಿ ಇರ್ತಾರೆ. ಲೀಲಾವತಿ ಅವರನ್ನು ನಾವು ಯಾಕೆ ಪ್ರೀತಿಸುತ್ತೀವಿ ಅಂದ್ರೆ ಅವತ್ತಿನಿಂದ ಅದೇ ಅನುಬಂಧ ಇದೆ. ಚಿಕ್ಕ ವಯಸ್ಸಿನಿಂದ ಅವರನ್ನು ನೋಡುತ್ತಿದ್ದೇನೆ. ಯಾವಾಗ ಕಂಡರೂ ಅದೇ ಆತ್ಮೀಯತೆ, ಅನುಬಂಧ ಇದೆ. ಅವರನ್ನು ಮರೆಯೋಕೆ ಸಾಧ್ಯವಿಲ್ಲ. ವಿನೋದ್ ಅವರನ್ನು ನೋಡಿದರೆ ಅವ್ರ ತಾಯಿಯನ್ನು ನೋಡಿದಂತೆ ಆಗುತ್ತದೆ” ಎಂದು ಶಿವರಾಜ್‌ಕುಮಾರ್ ಹೇಳಿದರು.


Share with

Leave a Reply

Your email address will not be published. Required fields are marked *