ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ

Share with

ವಿಟ್ಲ : ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘದ ಅಧ್ಯಕ್ಷ ಮುರುವ ನಡುಮನೆ ಮಹಾಬಲ ಭಟ್ ಘೋಷಿಸಿದರು.

ಅವರು ವಿಟ್ಲದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿ, ವರ್ಷಕ್ಕೆ ಎರಡು ಮೂರು ಬಾರಿ ಚುನಾವಣೆ ಬರುತ್ತದೆ. ಆಗ ಪರವಾನಿಗೆ ಹೊಂದಿರುವ ಕೋವಿಯನ್ನು ಪೊಲೀಸ್‌ ಠಾಣೆಯಲ್ಲಿ ಠೇವಣಿ ಇಡಬೇಕಾಗುತ್ತದೆ. ರೈತರು ಕೃಷಿ ಉತ್ಪನ್ನಗಳನ್ನು ನಾಶ ಮಾಡುವ ಪ್ರಾಣಿಗಳಿಂದ ಮತ್ತು ಕಳ್ಳರಿಂದ ರಕ್ಷಣೆಗೆ ಈ ಪರವಾನಿಗೆ ಪಡೆಯುತ್ತೇವೆ. ಆದರೆ ನಮಗೆ ಕೋವಿ ಉಪಯೋಗಕ್ಕಿಲ್ಲದಂತೆ ಮಾಡುವ ಸರಕಾರದ ಧೋರಣೆ ಸರಿಯಲ್ಲ. ಇದು ಸರಕಾರ ರೈತರನ್ನು ಕೀಳು ದರ್ಜೆಯ ಪ್ರಜೆಗಳಂತೆ ನೋಡಿಕೊಳ್ಳುವ ರೀತಿಯಾಗಿದೆ. ಎಪ್ರಿಲ್ 1ರ ಅನಂತರ ಕೋವಿ ಇಡಬೇಕೆಂದು ಜಿಲ್ಲಾಡಳಿತ ತಿಳಿಸಿದ್ದರೂ ಪೊಲೀಸ್ ಠಾಣೆಯಲ್ಲಿ ಮಾ.20 ರೊಳಗ ತಂದಿಡ ಬೇಕೆನ್ನುತ್ತಾರೆ. ಕೋವಿ ಠಾಣೆಯಲ್ಲಿದ್ದಾಗ ಆದ ಕಷ್ಟ ನಷ್ಟಗಳಿಗೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ಹೊಣೆ ವಹಿಸಿಕೊಂಡು ನಷ್ಟ ಭರಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚುನಾವಣೆಯಿಂದ ರೈತರಿಗೆ ಸಂಕಷ್ಟ ಬಂದಿದೆ. ರೈತರ, ಕೃಷಿಕರ ಜೀವನ ದುಸ್ತರವಾಗಿದೆ. ಆದುದರಿಂದ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್.ಕೆ.ಇದಿನಬ್ಬ ಸಜಿಪಮುನ್ನೂರು, ಸದಸ್ಯರಾದ ಪಿ.ಶಿವಚಂದ್ರ ಪಡುವನ್ನೂರು, ವಿನೋದ್ ಶೆಟ್ಟಿ ಪಡುವನ್ನೂರು, ಜಯಪ್ರಕಾಶ ರೈ ನೂಜಿಬಲು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *