ಉಡುಪಿ: ರಾಜ್ಯ ಸರಕಾರದ ಪಶು ಸಂಗೋಪನೆ ಇಲಾಖೆಯ ಜಿಲ್ಲೆಯ ಹೈನುಗಾರರ ಅಭಿಪ್ರಾಯ ಪಡೆಯದೇ 2019ನೇ ಸಾಲಿನ ಪಶುಗಣತಿ ಆಧಾರವಾಗಿ ಪಶು ಚಿಕಿತ್ಸಾಲಯವನ್ನು ಮುಚ್ಚಲು ಮುಂದಾಗುವ ಮೂಲಕ ಬಡ ಹೈನುಗಾರರಿಗೆ ಸಮಸ್ಯೆ ಸೃಷ್ಟಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪಶು ಸಂಗೋಪನೆ ಇಲಾಖೆಯ ನೂತನ ನಿಯಮಾವಳಿಗಳ ಸಾಧಕ ಬಾಧಕಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಬದಲು ರಾಜ್ಯ ಸರ್ಕಾರ 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿಲ್ಲ, ಹಸುಗಳಿಗೆ ಮಾರಣಾಂತಿಕ ಕಾಯಿಲೆ, ಹಸಿರು ಮೇವು, ನೀರಿನ ಕೊರತೆ ಮುಂತಾದ ಸಮಸ್ಯೆಗಳಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದು, ಈಗಾಗಲೇ ಪಶುಸಂಗೋಪನಾ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದು ಸರ್ಕಾರ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಉಡುಪಿ ಬ್ರಹ್ಮಾವರ ತಾಲೂಕಿನ ಹಲವು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಸರ್ಕಾರದ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿದರು.
ಸಭೆಯಲ್ಲಿ ಪಶು ಸಂಗೋಪನೆ ಉಪನಿರ್ದೇಶಕರಾದ ಡಾ.ರೆಡ್ಡಪ್ಪ, ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ್ ಕುಮಾರ್ ಶೆಟ್ಟಿ, ಡಾ.ಪ್ರದೀಪ್, ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾದ ರವಿರಾಜ ಹೆಗ್ಡೆ, ಸಾಣೂರು ನರಸಿಂಹ ನಾಯಕ್, ಬೋಳ ಸದಾಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ನಿರ್ದೇಶಕರಾದ ಕಮಾಲಾಕ್ಷ ಹೆಬ್ಬಾರ್ ಸ್ವಾಗತಿಸಿ, ಶ್ಯಾಮ್ ಪ್ರಸಾದ್ ಭಟ್ ನಿರೂಪಿಸಿದರು.