ಮಂಗಳೂರು: ಮಹಿಳೆಯೊಬ್ಬರು ನಗರದ ಫಾದರ್ ಮಲ್ಲರ್ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.


ತೆಲಂಗಾಣ ಮೂಲದ, ಸದ್ಯ ಮಂಗಳೂರಿನಲ್ಲಿ ಪತಿ ತೇಜ ಜತೆ ನೆಲೆಸಿರುವ ಬನೊತ್ ದುರ್ಗಾರವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು ನವಜಾತ ಶಿಶುಗಳಲ್ಲಿ ಎರಡು ಹೆಣ್ಣು ಮತ್ತು ಎರಡು ಗಂಡು ಆಗಿದೆ. ಮಕ್ಕಳ ತೂಕ 1.2 ಕೆಜಿ, 1.1 ಕೆಜಿ, 900 ಗ್ರಾಂ ಹಾಗೂ 800 ಗ್ರಾಂ.ಗಳಾಗಿವೆ.
ಈ ರೀತಿಯ ಹೆರಿಗೆ ಕ್ಲಿಷ್ಟಕರ ಹಾಗೂ ಅಪರೂಪ ಎಂದು ಹೇಳಲಾಗಿದೆ. ಅಂದಾಜು 7 ಲಕ್ಷದಲ್ಲಿ ಒಂದು ಈ ರೀತಿ ನಾಲ್ಕು ಮಕ್ಕಳ ಜನನ ಸಂಭವಿಸುತ್ತದೆ. ಈ ರೀತಿಯ ಹೆರಿಗೆಯು ಪ್ರಸವ ಪೂರ್ವ ಹಾಗೂ ಕಡಿಮೆ ತೂಕದಿಂದ ಕೂಡಿರುವ ಕಾರಣ, ಹೆರಿಗೆಯು ಅತ್ಯಂತ ಕ್ಲಿಷ್ಟಕರವಾಗಿರುತ್ತದೆ. ಗರ್ಭಾವಸ್ಥೆಯ ಸಂದರ್ಭ ಅಲ್ಪಾ ಸೌಂಡ್ ನಡೆಸುವ ಸಂದರ್ಭದಲ್ಲಿ ಈ ವಿಚಾರ ತಿಳಿದು ದಂಪತಿ ಅಚ್ಚರಿಗೊಳಗಾಗಿದ್ದರು. ಪ್ರಸವಪೂರ್ವ ಆರೈಕೆ ಮಾಡಿದ್ದ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಜಾಯ್ಲಿನ್ ಡಿಅಲ್ನೋಡಾ ಅವರು ಪ್ರತಿ ಹಂತದಲ್ಲಿಯೂ ದಂಪತಿಗೆ ಧೈರ್ಯವನ್ನು ತುಂಬಿದ್ದರು. ಆರಂಭದಲ್ಲಿ ದಂಪತಿ ಸಂತಸದ ನಡುವೆ ಆತಂಕಕ್ಕೆ ಒಳಗಾಗಿದ್ದರೂ, ಅಪಾಯದ ಸಾಧ್ಯತೆಯ ನಡುವೆಯೂ ನಾಲ್ಕು ಮಕ್ಕಳನ್ನು ಉಳಿಸಿ ಕೊಳ್ಳುವ ನಿರ್ಧಾರ ಮಾಡಿದ್ದರು. 30 ವಾರಗಳ ಗರ್ಭಾವಸ್ಥೆಯ ಬಳಿಕ ನ. 9ರಂದು ಬನೊತ್ ದುರ್ಗಾ ಅವರಿಗೆ ಇಲೆಕ್ಟಿವ್ ಸಿಸೇರಿಯನ್ ಮೂಲಕ ಹೆರಿಗೆ ಪ್ರಕ್ರಿಯೆ ನಡೆಸಲಾಗಿದೆ.




