ಪುತ್ತೂರು: ಗದ್ದೆ ತುಂಬಾ ಕೆಸರು, ಕೆಸರಿನ ನಡುವೆ ವಿವಿಧ ಸ್ಪರ್ಧೆಗಳು, ಕೆಸರಲ್ಲಿ ಎದ್ದು ಬಿದ್ದು ಹೊರಳಾಡಿ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಫಿಲೋಮಿನಾ ಪ. ಪೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಊರಿನ ಯುವಕರು, ಮಹನಿಯರು, ಮಹಿಳೆಯರು ಇವೆಲ್ಲ ಸನ್ನಿವೇಶಗಳು ನರಿಮೊಗರಿನ ಕೊಡಂಕೀರಿಯ ಶ್ರೀಧರ ಪೂಜಾರಿಯವರ ಗದ್ದೆಯಲ್ಲಿ ಆ.20 ರಂದು ಕಂಡುಬಂದವು.
ಸಂತ ಫಿಲೋಮಿನಾ ಪ.ಪೂ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರೆಡ್ ಕ್ರಾಸ್ ಘಟಕದ ಸಂಯೋಜನೆಯಲ್ಲಿ ಒಂದು ದಿನದ “ಫಿಲೋ ಸಂಭ್ರಮ”-ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ನಡೆಯಿತು.
ದೀಪ ಪ್ರಜ್ವಲಿಸಿ, ಗದ್ದೆಗೆ ಹಾಲನ್ನು ಎರೆದು, ತೆಂಗಿನಕಾಯಿ ಒಡೆಯುವ ಮೂಲಕ ಫಿಲೋ ಸಂಭ್ರಮವನ್ನು ಉದ್ಘಾಟಿಸಿದ ಸಂತ ಫಿಲೋಮಿನಾ ಪ.ಪೂ ಕಾಲೇಜಿನ ಪ್ರಾಚಾರ್ಯರಾದ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಕೊಡಂಕೀರಿಯ ಸುಂದರ ಪ್ರಕೃತಿ ತಾಣದಲ್ಲಿ ನಡೆಯುವ ಕೆಸರು ಗದ್ದೆಯಲ್ಲಿ ಮಣ್ಣಿನೊಂದಿಗಿನ ಕ್ರೀಡೆಗಳ ಅನುಭವ ಸಿಕ್ಕಾಗ ಮಕ್ಕಳ ಬದುಕಿಗೆ ಅದು ಸ್ಪೂರ್ತಿಯಾಗುತ್ತದೆ.ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲೆಡೆಯೂ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರುತ್ತದೆ. ಆದರೆ ಮಳೆಗಾಲದಲ್ಲಿ ಕ್ರೀಡೆಯನ್ನು ಆಯೋಜಿಸುವುದು ಅಷ್ಟು ಸುಲಭವಲ್ಲ. ಆದರೆ ಕೊಡಂಕೀರಿ ಗದ್ದೆಯಲ್ಲಿ ಎಲ್ಲವೂ ವಿಭಿನ್ನ. ಇಲ್ಲಿ ಎಡೆಬಿಡದೆ ಸುರಿಯುವ ಮಳೆಯಲ್ಲಿ, ಭತ್ತದ ಕೆಸರು ಗದ್ದೆಯನ್ನೇ ಮೈದಾನ ಮಾಡಿಕೊಂಡು ವಿವಿಧ ರೀತಿಯ ಕ್ರೀಡಾ ಕೂಟಗಳನ್ನು ನಡೆಸಿ ಸಂಭ್ರಮಿಸಿರುವುದು ಖುಷಿ ತರುವ ವಿಚಾರ ಎಂದರು. ಗ್ರಾಮೀಣ ಕ್ರೀಡೆಯು ಮನರಂಜನೆಯ ಸಾಧನವಾಗಿದ್ದರೂ, ಮಕ್ಕಳಲ್ಲಿ ಕೃಷಿಯನ್ನು ಪರಿಚಯಿಸುವ ಮಾಧ್ಯಮವೂ ಆಗಿದೆ. ಕ್ರೀಡೆಯಲ್ಲಿ ಆಸಕ್ತಿಯು ಕೃಷಿಯಲ್ಲಿ ಆಸಕ್ತಿ ಬೆಳೆಸಲು ಸಹಕಾರಿಯಾಗಿದೆ ಎಂದರು .ಫಿಲೋ ಸಂಭ್ರಮದ ಮೂಲಕ ಮಕ್ಕಳು ಗ್ರಾಮೀಣ ಕ್ರೀಡೆಗಳೊಂದಿಗೆ ಬೆರೆತು ಯ ಉತ್ತಮ ಕೃಷಿ ಬದುಕಿನ ಸೊಗಡಿನ ಅನುಭವವನ್ನು ಹಂಚಿಕೊಳ್ಳಲು ಕೆಸರ್ಡ್ ಒಂಜಿ ದಿನ ಉತ್ತಮ ವೇದಿಕೆಯಾಯಿತು. ಮರೆಯಾಗುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವುದು “ಫಿಲೋ ಸಂಭ್ರಮ”ದ ಉದ್ದೇಶ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ “ಕೆಸರ್ಡ್ ಒಂಜಿ ದಿನ”ದ ಗದ್ದೆಯ ರೂವಾರಿ ಕೊಡಂಕೀರಿ ಶ್ರೀಧರ ಪೂಜಾರಿ ಮಾತನಾಡಿ ನಮ್ಮ ಎಲ್ಲಾ ಹಬ್ಬಗಳು ಕೃಷಿಭೂಮಿಗಳಿಗೆ ಸಂಬಂಧಿಸಿವೆ ಮತ್ತು ನಮ್ಮ ಪೂರ್ವಜರು ಕ್ರೀಡಾ ಚಟುವಟಿಕೆಗಳನ್ನು ಸಹ ಹೊಲಗಳೊಂದಿಗೆ ಜೋಡಿಸಿದ್ದಾರೆ. ಗದ್ದೆಯಲ್ಲಿ ಭತ್ತ ಬಿತ್ತಿದ ನಂತರ ಪ್ರತಿ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಕ್ರೀಡೆಯಾದ ‘ನಾಟಿ ಓಟ’ (ಸುಗ್ಗಿಯ ಓಟ) ನಡೆಯಲಿದೆ. ಪೂರ್ವಜರ ಕಾಲದಲ್ಲಿ, ಭತ್ತಕ್ಕಾಗಿ ಉಳುಮೆ ಮಾಡಿದ ಕೆಸರು ಗದ್ದೆಗಳಲ್ಲಿ ಓಟಗಳನ್ನು ಆಯೋಜಿಸಲಾಗುತ್ತಿತ್ತು’ ಕ್ರೀಡಾ ಚಟುವಟಿಕೆಗಳು ಈಗ ಹೆಚ್ಚಿನ ಸಂಖ್ಯೆಯ ಯುವಕರನ್ನು ಕೃಷಿಭೂಮಿಗೆ ಸೆಳೆಯುತ್ತವೆ. ಹೆಚ್ಚು ಯುವಕರು ಕೃಷಿಯಲ್ಲಿ ಆಸಕ್ತಿ ಹೊಂದಿಲ್ಲ. ಕೃಷಿಯನ್ನು ಪರಿಚಯಿಸಲು ಮತ್ತು ಕೃಷಿಭೂಮಿಗಳಲ್ಲಿ ಆಸಕ್ತಿಯನ್ನು ಪ್ರಚೋದಿಸಲು, ಪೂರ್ವಜರ ಕಾಲದಿಂದಲೂ ಕೃಷಿಭೂಮಿಗಳಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುತ್ತಿದ್ದವು. ಗ್ರಾಮೀಣ ಕ್ರೀಡೆಗಳಿಗೆ ಸ್ಪೂರ್ತಿ ನೀಡುವುದಕ್ಕೆ ಕೊಡಂಕೀರಿಯ ಗದ್ದೆಯು ಸಾಕ್ಷಿಯಾಗಿ ನಿಂತಿದೆ ಎಂದರು.
ವೇದಿಕೆಯಲ್ಲಿದ್ದ ಅನ್ನದಾನ ಸೇವಾ ಕರ್ತೃ, ಪುತ್ತೂರು ಗೇರು ಸಂಶೋಧನಾ ಕೇಂದ್ರದ ನಿವೃತ್ತ ಸಿಬ್ಬಂದಿ ವೀರಪ್ಪ ಪೂಜಾರಿ ಪೇರಡ್ಕ ಫಿಲೋ ಸಂಭ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಇತಿಹಾಸ ಉಪನ್ಯಾಸಕ ಮತ್ತು ಫಿಲೋ ರೋವರ್ಸ್ & ರೇಂಜರ್ಸ್ ಘಟಕದ ವ್ಯವಸ್ಥಾಪಕ ಶರತ್ ಆಳ್ವ ಚನಿಲ ಕಾರ್ಯಕ್ರಮ ಆಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಗಣಕವಿಜ್ಞಾನ ವಿಭಾಗದ ಉಪನ್ಯಾಸಕ ಮತ್ತು ರೋವರ್ ಸ್ಕೌಟ್ ನಾಯಕ ಚಂದ್ರಾಕ್ಷ ಕಾರ್ಯಕ್ರಮ ನಿರೂಪಿಸಿ ,ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಮತ್ತು ರೆಡ್ ಕ್ರಾಸ್ ಘಟಕದ ವ್ಯವಸ್ಥಾಪಕಿ ಜ್ಯೋತಿ .ಎಂ ವಂದಿಸಿದರು. ಘಟಕದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು ಕಲಾವಿಭಾಗದ ಮುಖ್ಯಸ್ಥ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕ ಭರತ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ರೋವರ್ ಸ್ಕೌಟ್ ನಾಯಕ ರಾಜೇಶ್ ಮೂಲ್ಯ , ಕನ್ನಡ ಉಪನ್ಯಾಸಕಿ ಉಷಾ ಯಶವಂತ್ , ಅರ್ಥಶಾಸ್ತ್ರ ಉಪನ್ಯಾಸಕಿ ಎಂ .ಗೀತಾ ಕುಮಾರಿ , ಗಣಕವಿಜ್ಞಾನ ವಿಭಾಗದ ಸಹಾಯಕ ಗುರುಪ್ರಸಾದ್ ಬೆದ್ರೋಡಿ ,ಬೋಧಕೇತರ ಸಿಬ್ಬಂದಿ ರೋಹಿತ್ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ಊರಿನ ಪ್ರತಿಭೆಗಳಾದ ಕಮಲ ಮತ್ತು ಯಶೋಧರವರ ತುಳು ಪಾಡ್ದಾನವನ್ನು ಹಾಡಿದರು.
ಪರೀಕ್ಷಿತ್ ತೋಳ್ಪಾಡಿ, ಗಣೇಶ್ ಗೌಡ ಪೇರಡ್ಕ ಬೆಳಗ್ಗಿನ ಮತ್ತು ಸಂಜೆಯ ಉಪಾಹಾರದ ವ್ಯವಸ್ಥೆಯನ್ನು ಮಾಡಿದರು. ಕಾರ್ಯಕ್ರಮಕ್ಕೆ ನರಿಮೊಗರು ಸುವರ್ಣ ಎಸ್ಟೇಟ್ ನ ವೇದನಾಥ ಸುವರ್ಣ , ನರಿಮೊಗರು ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಸುಧಾಕರ ಕುಲಾಲ್, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಯಶೋಧ ಕೆ ಗೌಡ ,ಸಾಯಿರಾಜ್ ಕೊಟ್ಟಾರಿ ಹಾಗೂ ಅನೇಕ ಮಂದಿ ಊರಿನ ಮಹನೀಯರು ಉಪಸ್ಥಿತರಿದ್ದರು.
ಸುರೇಶ ಸಾಲ್ಯಾನ್ ಕೊಡಂಕೀರಿ ,ರಘು ಪೇರಡ್ಕ ,ಜಗದೀಶ್ ಎರಕಡಪು, ಅವಿನಾಶ್ ದರ್ಖಾಸು ,ಕಿರಣ್ ಪೇರಡ್ಕ ,ಲಿಖಿನ್ ಕೊಡಂಕೀರಿ, ಪ್ರಜ್ವಲ್ ಪರಮಾರ್ಗ, ಸಾತ್ವಿಕ್ ಸೇರಾಜೆ ,ಚೈತನ್ಯ ಪೇರಡ್ಕ ಸ್ಪರ್ದೆಗಳಿಗೆ ತೀರ್ಪುಗಾರರಾಗಿ ಸಹಕರಿಸಿದರು.
ಕಾಲೇಜಿನ ಎರಡು ಘಟಕಗಳ ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ಊರಿನ ಯುವಕರು , ಮಹನೀಯರು ,ಮಹಿಳೆಯರು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡರು .