ಬೆಂಗಳೂರು: ರಾಜ್ಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ರಾಜ್ಯ ಸರಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ.


ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ತಿಂಗಳಿನಲ್ಲಿ ಸುತ್ತೋಲೆಯನ್ನು ಹೊರಡಿಸಿದ್ದು, ನ.2ರಂದು ಪೌರಾಡಳಿತ ನಿರ್ದೇಶನಾಲಯವು ಆದೇಶವನ್ನು ಹೊರಡಿಸಿದೆ.
ರಾಜ್ಯಾದ್ಯಂತ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹೊಡೆಯಬಹುದು. ಉಳಿದ ಸಮಯದಲ್ಲಿ ಸುಡುಮದ್ದು ಸಿಡಿಸಲು ಅವಕಾಶವಿಲ್ಲ. ಯಾವುದೇ ಹಸುರು ಪಟಾಕಿಗಳನ್ನು ರ್‍ಯಾಂಡಮ್ ಆಗಿ ಸಂಗ್ರಹಿಸಿ, ಶಬ್ದದ ಪ್ರಮಾಣ ಮಾಪನ ಮಾಡಬೇಕು ಹಾಗೂ ನಿಗದಿತ ಗುಣಮಾಪನಗಳಿಗೆ ಸರಿಹೊಂದದಿದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ.
ಹಸುರು ಪಟಾಕಿ ಮಾತ್ರ ಬಳಸಬೇಕು ಹಾಗೂ ಬಳಸುವಾಗ ಪ್ರಾಣಿ, ಪಕ್ಷಿಗಳು, ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಮತ್ತು ಯಾವುದೇ ನಿಷೇಧಿತ ಪ್ರದೇಶದಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ. ಪರಿಸರ ಸ್ನೇಹಿ ದೀಪಾವಳಿ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.




