ಪುತ್ತೂರು: ಪುತ್ತೂರಿನಲ್ಲಿ ನಡೆದ ಬಂದೂಕು ತೋರಿಸಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯ ಕಸ್ತೂರಿ ರೈ ಹಾಗೂ ಅವರ ಪುತ್ರ ಗುರುಪ್ರಸಾದ್ ರೈ ಇಬ್ಬರನ್ನು ಮನೆಯೊಳಗೆ ಕಟ್ಟಿ ಹಾಕಿ, ಬಂದೂಕು ತೋರಿಸಿ ಚಿನ್ನ, ಹಣ ಹಾಗೂ ಇತರ ಸಾಮಗ್ರಿಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಾಡೂರು ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯಿಂದ ಒಬ್ಬನನ್ನು ವಶಕ್ಕೆ ಪಡೆದಿದ್ದು, ಈ ಪ್ರಕರಣದಲ್ಲಿ ಐದಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪ ಬಾಡೂರಿನ ಕ್ಲಬ್ ಒಂದರಲ್ಲಿ ಆಟವಾಡುತ್ತಿದ್ದ ಆರೋಪಿಯನ್ನು ಮಪ್ತಿಯಲ್ಲಿದ್ದ ಕರ್ನಾಟಕ ಪೊಲೀಸರು ಕ್ಲಬ್ ಕಟ್ಟಡಕ್ಕೆ ಸುತ್ತುವರಿದು ವಶಕ್ಕೆ ತೆಗೆದುಕೊಂಡಿದ್ದು, ಗಾಂಜಾ ಮಾರಾಟ ಸೇರಿದಂತೆ ಕೆಲವೊಂದು ಕ್ರಿಮಿನಲ್ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಈತನ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಾಗಿದೆ.
ಪ್ರಕರಣದ ಆರಂಭದಿಂದಲೂ ಕಾಸರಗೋಡಿನ ವ್ಯಕ್ತಿಯೊಬ್ಬನ ಕೈವಾಡವಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಇದರಿಂದ ಕಾಸರಗೋಡಿನಲ್ಲಿ ತನಿಖೆಯನ್ನು ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.