ಬಿರುಸಿನ ಗಾಳಿ ಮಳೆ- ಕಾಸರಗೋಡು ಜಿಲ್ಲೆಯ ಹಲವೆಡೆ ವ್ಯಾಪಕ ಹಾನಿ

Share with

ಕುಂಬಳೆ: ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಾದ್ಯಂತ ವ್ಯಾಪಕ ಹಾನಿಯಾಗಿದೆ. ಕಾರಡ್ಕ ಪಂಚಾಯತ್ ವ್ಯಾಪ್ತಿಯ ಪುಂಡಿಕಾಯಿಯಲ್ಲಿ ಬಯಲುಗದ್ದೆಯ ಪಕ್ಕದ ಗುಡ್ಡ ಕುಸಿದು ತೋಟ ಜಲಾವೃತಗೊಂಡಿದೆ. ಬಯಲಿನ ಮಧ್ಯಭಾಗದ ಗೋಪಾಲ ಮಣಿಯಾಣಿ ಅವರ ಮನೆ ಪಕ್ಕದ ಗುಡ್ಡ ಕುಸಿದು ತೋಡಿಗೆ ಬಿದ್ದು ನೀರು ತೋಟದ ಮಧ್ಯೆ ಹರಿಯುತ್ತಿದೆ. ನಾರಾಯಣ ಬಲ್ಲಾಳ್ ,ಬಾಲಕೃಷ್ಣ ಮಾಸ್ಟರ್ ಅವರ ತೋಟಕ್ಕೆ ತೋಡಿನ ನೀರು ಹರಿದು ಕೃಷಿ ನಾಶವಾಗಿದೆ.
ಅಂಗಡಿ ಮೊಗರು ಶಾಲೆ ಬಳಿ ರಸ್ತೆಗೆ ಮಣ್ಣು ಜರಿದು ಬಿದ್ದು ಸಂಚಾರಕ್ಕೆ ತೊಡಕಾಗಿದೆ. ಇನ್ನಷ್ಟು ಮಣ್ಣು ಕುಸಿದು ಬೀಳುವ ಸಾಧ್ಯತೆ ಇದ್ದು ಸ್ಥಳೀಯರು ಆತಂಕದಲ್ಲಿದ್ದಾರೆ.
ಚೆರ್ಕಳ ಚಟ್ಟಂಚಾಲು ಹೆದ್ದಾರಿಯ ಮೂರು ಕಡೆಗಳಲ್ಲಿ ಗುಡ್ಡ ಜರಿದು ಬಿದ್ದಿದೆ. ಕುಂಬಳೆ ಮೊಗ್ರಾಲ್ ಕಡವತ್ ತಗ್ಗು ಪ್ರದೇಶಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ನೀರು ನುಗ್ಗಿ ಸ್ಥಳೀಯ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ಹೆಚ್ಚಿನ ಮನೆಯವರು ಭಯದಿಂದಲೇ
ಕಾಲ ಕಳೆಯುವಂತಾಗಿದೆ. ಕೊಯಿಪ್ಪಾಡಿ ರಸ್ತೆಯ ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದೆ.
ಕಡಲೊರೆತ
ಮಂಗಲ್ಪಾಡಿ ಪಂಚಾಯತ್‌ನ ಪೆರಿಂಗಡಿಯಲ್ಲಿ ಕಡಲೊರೆತದಿಂದ ಇಲ್ಲಿನ ರಸ್ತೆ ಬದಿ ಮತ್ತು ಕೆಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಅಲ್ಲದೆ ಕೆಲವು ಮನೆಗಳು ಕಡಲು ಪಾಲಾಗುವ ಭೀತಿಯಲ್ಲಿದೆ. ಕುಂಬಳೆ ಪೆರ್ವಾಡು ಕಡುಪ್ಪುರ ಎಂಬಲ್ಲಿ ಸಮುದ್ರ
ಕೊರೆತದಿಂದ ಹಲವಾರು ಮನೆಗಳು ಅಪಾಯದಂಚಿನಲ್ಲಿವೆ. ಇಲ್ಲಿ ಲಕ್ಷಗಟ್ಟಲೆ ವ್ಯಯಿಸಿ ನಿರ್ಮಿಸಿದ ತಡೆಗೋಡೆ ನೀರು ಪಾಲಾಗಿದೆ. ಮಂಗಲ್ಪಾಡಿಯ ಮೇಲಿನ ಸೋಂಕಾಲು ಪ್ರತಾಪ ನಗರ ರಸ್ತೆಗೆ ಪಕ್ಷದ ಚರಂಡಿಯ ನೀರು ಹರಿದು ಹೊಳೆಯಂತಾಗಿದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ರೀತಿ ಧಾರಾಕಾರ ಮಳೆ ಸುರಿದಲ್ಲಿ ಇನ್ನಷ್ಟು ಅನಾಹುತಗಳು
ಸಂಭವಿಸಲಿವೆ. ಜಿಲ್ಲಾಡಳಿತ ಸಂಭಾವ್ಯ ದುರಂತ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಂಡಿದೆ.


Share with

Leave a Reply

Your email address will not be published. Required fields are marked *