ಭಟ್ಕಳ: ಅಶ್ಲೀಲ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಸುತ್ತಿದ್ದ ಇನ್ಸ್ಟಾಗ್ರಾಮ್ ಗೆಳೆಯನ ಕಿರುಕುಳದಿಂದ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ ತಾಲೂಕಿನ ಕೊಡಮಕ್ಕಿ, ಹಾಡವಳ್ಳಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ನೇತ್ರಾ ಮುತ್ತಯ್ಯ ಗೋವಾಳಿ ಎಂದು ಗುರುತಿಸಲಾಗಿದ್ದು, ಈಕೆಯು ಭಟ್ಕಳ ನಗರದ ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಈಕೆಗೆ ಮುಂಡಳ್ಳಿ ನಿವಾಸಿ ಗೋವರ್ಧನ ಮೊಗೇರ ಎಂಬಾತ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ನಂತರ ಗೆಳೆತನ ಮಾಡಿಕೊಂಡಿದ್ದ. ಆದರೆ ಕೆಲವು ದಿನಗಳಿಂದ ಕರೆ ಮಾಡಿ ತಾನು ಖರ್ಚು ಮಾಡಿದ ಹಣ ಕೊಡುವಂತೆ ಹೆದರಿಸಿ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇಲ್ಲದಿದ್ದರೆ ನಿನ್ನ ಅಶ್ಲೀಲ ಫೋಟೋಗಳನ್ನು ತಾನು ಫೇಸ್ ಬುಕ್ ನಲ್ಲಿ ಹಾಕಿ ನಿನ್ನ ಮಾನ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದಾನೆ. ಇದರಿಂದ ಮನನೊಂದ ಯುವತಿಯು ತನ್ನ ಹಳೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ತನ್ನ ಮಗಳ ಸಾವಿಗೆ ಗೋವರ್ಧನ ಮೊಗೇರ ಈತನ ಕಿರುಕುಳವೇ ಕಾರಣವಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಯುವತಿಯ ತಂದೆ ಮುತ್ತಯ್ಯ ಗೋವಾಳಿ ಅವರು ದೂರು ನೀಡಿದ್ದಾರೆ.