ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ 2, 4, 8 ವಾರ್ಡ್ ವ್ಯಾಪ್ತಿಯ ತೂಮಿನಾಡು, ಕುಂಜತ್ತೂರು ಪದವು, ಮಂಜೇಶ್ವರ ಕುನ್ನು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕೇರಳ ನೀರು ಸರಬರಾಜು ಇಲಾಖೆಯ ನೀರಿನ ಪೈಪುಗಳು ತುಂಡರಿಸಲ್ಪಟ್ಟು ಪೈಪ್‌ಗಳಿಂದ ನೀರು ಪೋಲಾಗುತ್ತಿರುವುದು ನಿತ್ಯ ದರ್ಶನವಾಗಿದೆ.
ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರ ಈ ಬಗ್ಗೆ ಕುಂಬಳೆ ಸಹಾಯಕ ಎಂಜಿನಿಯರ್ ಕಚೇರಿಗೆ ಹಲವಾರು ಸಲ ದೂರು ನೀಡಿದರೂ, ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ.
ಪೈಪ್‌ಗಳಲ್ಲಿ ಉಂಟಾಗುವ ಸೋರಿಕೆಯಿಂದ ಪ್ರತಿದಿನ ಲಕ್ಷಾಂತರ ಲೀಟರ್ ನೀರು ನಷ್ಟವಾಗುತ್ತಿದೆ. ಈ ಸಮಸ್ಯೆ ಮುಂದುವರಿದಿರುವುದರಿಂದ ಅನೇಕ ಮನೆಗಳಿಗೆ ನೀರು ಸರಬರಾಜು ಕೂಡಾ ಆಗುತ್ತಿಲ್ಲವೆನ್ನಲಾಗಿದೆ
“ಪ್ರತಿದಿನವೂ ನೀರು ಲಭ್ಯವಾಗದೆ ನಾವು ದೊಡ್ಡ ತೊಂದರೆಯಲ್ಲಿದ್ದೇವೆ,” ಎಂದು ಸ್ಥಳೀಯ ನಿವಾಸಿಗಳು ಹೇಳುತಿದ್ದಾರೆ. “ಸಹಾಯಕ ಎಂಜಿನಿಯರ್‌ನೊಂದಿಗೆ ಸಂಪರ್ಕಿಸಲು ನಾವು ಹಲವಾರು ಬಾರಿ ಪ್ರಯತ್ನಿಸಿದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಬಹಳ ನಿರಾಶೆ ಉಂಟುಮಾಡಿದೆ. ಎಂಬುದು ಅವರ ಆರೋಪ.
ಕುಂಬಳೆ ಸಹಾಯಕ ಎಂಜಿನಿಯರ್ ಈ ವಿಷಯದಲ್ಲಿ ಪ್ರತಿಕ್ರಿಯಿಸಬೇಕಾದರೂ, ಜನರು ನೀಡಿದ ದೂರುಗಳಿಗೆ ಸೂಕ್ತ ಪ್ರಾಮುಖ್ಯತೆ ನೀಡದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಜಲವಿತರಣಾ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದೂ ನೀರು ಸೋರಿಕೆಯನ್ನು ತಡೆಗಟ್ಟಲು ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.