ನಾಡ್ವಾಲಿನ ತಿಂಗಳೆ ಉಗ್ರಾಣಿಬೆಟ್ಟು ಸಮೀಪ ಜು. 18ರಂದು ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದ ಕೂಲಿ ಕಾರ್ಮಿಕನ ಮೃತ ದೇಹ ಜು. 20ರ ಮಧ್ಯಾಹ್ನ ದೊರೆತಿದೆ.
ತುಮಕೂರಿನ ತಿಪಟೂರು ಮೂಲದ ಹೆಬ್ರಿಯ ನಾಡ್ತಾಲು ಗ್ರಾಮದ ಉಗ್ರಾಣಿಬೆಟ್ಟುವಿನಲ್ಲಿ ತೋಟದ ಕೆಲಸ ಮಾಡಿಕೊಂಡಿರುವ ಆನಂದ (55) ಹೊಳೆಗೆ ಬಿದ್ದು ನಾಪತ್ತೆಯಾದವರು. ತಿಂಗಳೆಯ ಉಗ್ರಾಣಿಬೆಟ್ಟುವಿನ ಮನೋರಾಮಯ್ಯ ಶೆಟ್ಟಿ ಎಂಬವರ ತೋಟದ ಕೆಲಸ ಮಾಡಿಕೊಂಡಿದ್ದ ಆನಂದ ಬ್ರಹ್ಮಾವರಕ್ಕೆ ಹೋದವರು ಬುಧವಾರ ವಾಪಸು ಬರುವಾಗ ಹೊಳೆ ತುಂಬಿ ಹರಿಯುತ್ತಿತ್ತು. ಹೀಗಾಗಿ ಚೇರೋಳಿ ಎಂಬಲ್ಲಿರುವ ಮನೋರಾಮಯ್ಯನವರ ಸಂಬಂಧಿಕರ ಮನೆಗೆ ಹೋಗಿ ಊಟ ಮಾಡಿ ಬಳಿಕ ಮನೆಯವರು ಪ್ರವಾಹ ಇರುವುದರಿಂದ ಇವತ್ತು ಹೋಗುವುದು ಬೇಡ ಎಂದು ಕೇಳಿದರೂ ಹೊರಟಿದ್ದರು. ಅವರ ಜತೆ ರಾಮಣ್ಣ ಎಂಬವರೂ ಇದ್ದರು. ಹೊಳೆಗೆ ಹಾಕಿದ್ದ ಮರದ ಸೇತುವೆಯನ್ನು ಹಗ್ಗ ಹಿಡಿದುಕೊಂಡು ದಾಟುವಾಗ ಆಯತಪ್ಪಿ ಹೊಳೆಗೆ ಬಿದ್ದ ಆನಂದ ಅವರನ್ನು ರಾಮಣ್ಣ ಕೋಲು ನೀಡಿ ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೆಬ್ರಿ ಪೊಲೀಸರು ಹಾಗೂ ಸ್ಥಳೀಯರು ಗುರುವಾರ ಸಂಜೆಯಿಂದಲೇ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಶುಕ್ರವಾರ ಹೆಬ್ರಿ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ಅಗ್ನಿಶಾಮಕ ದಳದವರು ಕಾರ್ಯಾಚರಣೆ ಮಾಡಿ ಸುಮಾರು 10 ಕಿ.ಮೀ.ನಷ್ಟು ದೂರ ಹೊಳೆಯಲ್ಲಿ ಹುಡುಕಾಡಿದರೂ ಪ್ರಯೋಜನವಾಗಿಲ್ಲ
ಶುಕ್ರವಾರ ದಿನವಿಡೀ ಶೋಧ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಶನಿವಾರ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಸಹಕಾರದೊಂದಿಗೆ ಹೆಬ್ರಿ ಪೊಲೀಸರು ಮತ್ತೆ ಕಾರ್ಯಾಚರಣೆ ನಡೆಸಿದ್ದು ಮಧ್ಯಾಹ್ನ ಸುಮಾರರು 2.30 ಗಂಟೆಗೆ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.