ಉಡುಪಿ: ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಕ್ಷುಲ್ಲಕ ಕಾರಣಕ್ಕಾಗಿ ತಮ್ಮ ತನ್ನ ಅಣ್ಣನನ್ನೇ ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದಾನೆ. ಹೆಬ್ರಿ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜೆಡ್ಡು ಎಂಬಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ನಾಲ್ಕೂರು ಗ್ರಾಮದ ಕಜ್ಕೆ ಅರಮನೆಜೆಡ್ಡು ನಿವಾಸಿ ಗುಲಾಬಿ ಎಂಬವರ ಮಗ ಮಂಜುನಾಥ (35) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಮೃತರ ತಮ್ಮ ವಿಶ್ವನಾಥ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಮತ್ತು ವಿಶ್ವನಾಥ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆಗಾಗ ಇವರ ಮಧ್ಯೆ ಗಲಾಟೆ ಆಗುತ್ತಿದ್ದು, ಮಧ್ಯರಾತ್ರಿ ವೇಳೆ ಮಂಜುನಾಥ, ತನ್ನ ತಮ್ಮ ವಿಶ್ವನಾಥನನ್ನು ಉದ್ದೇಶಿಸಿ, ನನ್ನ ಹೆಂಡತಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿದನು. ಇದೇ ವಿಚಾರದಲ್ಲಿ ವಿಶ್ವನಾಥ ಕೋಪ ಗೊಂಡು ಛಾವಣಿಯಲ್ಲಿದ್ದ ದೊಣ್ಣೆಯಿಂದ ಮಂಜುನಾಥ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.
ಇದರ ಪರಿಣಾಮ ಮಂಜುನಾಥ್ ಅವರ ತಲೆಯಿಂದ ತೀವ್ರ ರಕ್ತ ಹರಿದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹೇಶ ಟಿ.ಎಂ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.