ಗಮನ ಸೆಳೆದ 2024 – 25 ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉದಯ ಹೈಯರ್ ಸೆಕಂಡರಿ ಶಾಲಾ ವಿದ್ಯಾರ್ಥಿ ಪರಿಷತ್ ಚುನಾವಣೆ

Share with

ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಹೆಸರಾಂತ ವಿದ್ಯಾಲಯಗಳಲ್ಲೊಂದಾದ ಮಂಜೇಶ್ವರ ಉದಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2024 – 25 ನೇ ಸಾಲಿನ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ ಚುನಾವಣಾ ಮಾದರಿಯಲ್ಲಿ ನಡೆಯಿತು. ಮುಖ್ಯ ಚುನಾವಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರಾದ ಜೆರಾಲ್ಡ್ ಐವಾನ್ ಕ್ರಾಸ್ತ ರವರ ಅಧಿಸೂಚನೆಯೊಂದಿಗೆ ಚುನಾವಣಾ ದಿನಾಂಕ ವೇಳಾಪಟ್ಟಿ ಪ್ರಕಟಿಸಲಾಯಿತು.
ವಿದ್ಯಾರ್ಥಿಗಳು ನಾಮಪತ್ರವನ್ನು ಸೂಚಕರ ಸಹಿಯೊಂದಿಗೆ ಚುನಾವಣಾಧಿಕಾರಿಯಾದ ಫಾದರ್ ಸಂತೋಷ್ ಡಿಸೋಜ ಹಾಗೂ ಐವನ್ ಫೆರ್ನಾಂಡಿಸ್ ರವರಿಗೆ ಸಲ್ಲಿಸಿದರು.

ನಂತರ ನಾಮಪತ್ರ ಪರಿಶೀಲಿಸಿ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಗಳು ಜರುಗಿದವು. ನೈಜ ಚುನಾವಣೆಯಂತೆ ವಿದ್ಯಾರ್ಥಿಗಳಿಗೆ ಚಿಹ್ನೆಗಳ ಪಟ್ಟಿ ನೀಡಿ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ತೆರಳಿ ಪ್ರಚಾರಕ್ಕೆ ಕೂಡಾ ಅವಕಾಶ ಕಲ್ಪಿಸಲಾಗಿತ್ತು. 

ಇಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಯ ಮೂಲಕ ಪೂರ್ಣ ಪ್ರಮಾಣದಲ್ಲಿ ಚುನಾವಣೆ ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕ (ಎಸ್ ಪಿ ಎಲ್) ಹಾಗೂ ಶಾಲಾ ವಿದ್ಯಾರ್ಥಿ ಉಪ ನಾಯಕ (ಎ ಎಸ್ ಪಿ ಎಲ್) ವಿಭಾಗಗಳಿಗೆ ಚುನಾವಣೆಯು ನಡೆಯಿತು. ಎಸ್ ಪಿ ಎಲ್ ವಿಭಾಗದಲ್ಲಿ ನಾಲ್ಕು ಮತ್ತು ಎ ಎಸ್ ಪಿ ಎಲ್ ವಿಭಾಗದಲ್ಲಿ ಐದು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.

ಒಂದು ವಾರದ ಮುಂಚೆ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.  ವಿಶೇಷವಾಗಿ ತಯಾರಿಸಲಾದ ಮತಗಟ್ಟೆಯಲ್ಲಿ ಶಿಕ್ಷಕರೂ ಮತ್ತು ವಿದ್ಯಾರ್ಥಿಗಳೂ ಮತದಾನ ಅಧಿಕಾರಿಗಳಾಗಿದ್ದರು.

ಆಧಾರ್ ಕಾರ್ಡ್ ಬಳಸಿ ವಿದ್ಯಾರ್ಥಿಗಳು ತಮ್ಮ ಮತದಾನ ಹಕ್ಕು ಚಲಾಯಿಸಿದರು. ಮತ ಚಲಾಯಿಸುವಾಗ ಯಂತ್ರದಿಂದ ಬೀಪ್ ಧ್ವನಿ ಸಹ ವ್ಯವಸ್ಥೆ ಮಾಡಲಾಗಿತ್ತು. ಚಿಹ್ನೆ ಸಹಿತ ಇರುವ ಮುದ್ರಿತ ಮತಪತ್ರ, ಮತದಾರರ ಪಟ್ಟಿ, ವೋಟಿಂಗ್ ಕಂಪಾರ್ಟಮೆಂಟ್ ರಬ್ಬರ್ ಮೊಹರು ಅಳಿಸಿಹಾಕಲಾಗದ ಶಾಹಿ, ಚುನಾವಣ ಸಾಮಗ್ರಿ ಪಡೆಯುವಿಕೆ, ಹಿಂತಿರುಗಿಸುವಿಕೆ ಚುನಾವಣಾ ಏಜೆಂಟರ್ ನೇಮಕಾತಿ, ಹಾಜರಾತಿ ಕರ್ತವ್ಯದ ಪ್ರಮಾಣ ಪತ್ರ ಬಳಸಿ ಮತ ಚಲಾವಣೆ, ಮತಗಟ್ಟೆ ಅಧಿಕಾರಿ, ಪಿ.ಆರ್.ಓ, ಪಿ.ಆರ್.ಓ.ಡಿ ದರ್ಜೆ ಸಹಾಯಕರು ಆರಕ್ಷಕರು ಇವೆಲ್ಲ ಶಾಲೆಯ ಸಂಸತ್ತಿನ ಚುನಾವಣೆಯಲ್ಲಿ ಕಂಡುಬಂದಿತು.

  143 ಮತಗಳನ್ನು ಪಡೆದ ಆಲ್ವಿನ್ ಸಿಜೊ ಶಾಲಾ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದರೆ 104 ಮತಗಳನ್ನು ಪಡೆದ ಖಲಂದರ್ ಅಯಾನ್
ಉಪನಾಯಕನಾಗಿ ಆಯ್ಕೆಯಾದರು.
ಇದು ಚುನಾವಣೆ ಅಣಕು ಪ್ರದರ್ಶನವಲ್ಲ ಅನ್ನೋದು ಮತ್ತೊಂದು ವಿಶೇಷ. ಶಾಲಾ‌ ಶಿಕ್ಷಕರ ಈ ಕಾರ್ಯಕ್ಕೆ ಪೋಷಕರು ಹಾಗೂ ಮಂಜೇಶ್ವರದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *