ಉಡುಪಿ: ತಂತಿ ಬೇಲಿಯಲ್ಲಿ ಸಿಲುಕಿಕೊಂಡಿದ್ದ ಸುಮಾರು ನಾಲ್ಕೈದು ವರ್ಷ ಪ್ರಾಯದ ಗಂಡು ಚಿರತೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿರುವ ಘಟನೆ ಕುಕ್ಕೆಹಳ್ಳಿ- ಹಿರಿಯಡ್ಕ ರಸ್ತೆಯ ಬಕ್ಕಾರೆ ಎಂಬಲ್ಲಿ ನಡೆದಿದೆ.
ಬೇಟಿ ಹರಸಿ ಬಂದ ಚಿರತೆಗೆ ಸರಕಾರಿ ಜಾಗದಲ್ಲಿ ಅಳವಡಿಸಲಾಗಿದ್ದ ತಂತಿಯು ಸೊಂಟದ ಭಾಗಕ್ಕೆ ಉರುಳು ಬಿದ್ದಿದ್ದು, ಇದರಿಂದ ಚಿರತೆ ನರಳಾಡುತ್ತಿತ್ತು. ಚಿರತೆಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.
ಮಧ್ಯಾಹ್ನ 3ಗಂಟೆಗೆ ಸುಮಾರಿಗೆ ಬೋನಿನೊಂದಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಮಂಗಳೂರಿನ ಅರವಳಿಕೆ ತಜ್ಞರಿಗೆ ಮಾಹಿತಿ ನೀಡಿದರು. ಸಂಜೆ 5.30ರ ಸುಮಾರಿಗೆ ಆಗಮಿಸಿದ ಅರವಳಿಕೆ ತಜ್ಞರಾದ ಯಶಸ್ವಿ ನಾರಾವಿ ಹಾಗೂ ಅಕ್ಷಯ್ ಶೇಟ್ ಉರುಳಿನಲ್ಲಿ ಸಿಲುಕಿದ ಚಿರತೆಗೆ ಶೂಟ್ ಮಾಡಿ ಅರವಳಿಕೆ ಔಷಧ ನೀಡಿದರು.
ಇದರಿಂದ ಪ್ರಜ್ಞೆ ತಪ್ಪಿದ ಚಿರತೆಯನ್ನು ಬೋನಿನೊಳಗೆ ಹಾಕಿ, ನಿಗಾದಲ್ಲಿ ಇರಿಸಲಾಯಿತು. ಬಳಿಕ ಚಿಕಿತ್ಸೆ ನೀಡಿ ಅದನ್ನು ಸುರಕ್ಷಿತ ಅರಣ್ಯವಾಗಿ ಅರಣ್ಯಕ್ಕೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ಧೇಶ್ವರ ಕುಂಬಾರ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್, ನವೀನ್ ಡಿ.ಎನ್., ಗಸ್ತು ಅರಣ್ಯ ಪಾಲಕರಾದ ಅರುಣ್, ಶ್ರೀಕಾಂತ್, ಪ್ರವೀಣ್, ಅರಣ್ಯ ವೀಕ್ಷಕರಾದ ಸಂಕ, ಸುಧರ್ಶನ್, ಪೊಲೀಸ್ ಹಿರಿಯಡ್ಕ ಎಸ್ಸೈ ಮಂಜುನಾಥ್ ಇದ್ದರು.