ಬಂಟ್ವಾಳ: ಬಂಟ್ವಾಳದ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಮಂಗಳೂರು ತಾಲೂಕು ಬೆಂಗ್ರೆ ಕಸಬಾ ನಿವಾಸಿ ಪರಾಜ್ (೨୭) ಹಾಗೂ ಮಂಗಳೂರು ತಾಲೂಕು ಚೊಕ್ಕಬೆಟ್ಟು-ಕೃಷ್ಣಾಪುರ ನಿವಾಸಿ ತೌಸಿಫ್ (೩೪) ಎಂಬವರನ್ನು ಬಂಧಿಸಿ ಅವರಿಂದ ಸುಮಾರು ೧೫.೫೬ ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜ.೯ರಂದು ಸಜಿಪ ಮುನ್ನೂರು ಗ್ರಾಮದ ಮೈಕೆಲ್ ಡಿಸೋಜಾ ಎಂಬವರ ಮನೆಯ ಬಾಗಿಲು ಮುರಿದು ನುಗ್ಗಿದ ದುಷ್ಕರ್ಮಿಗಳು ಸುಮಾರು ೫.೩೬ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ೧೨,೨೩,000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕಾರು ಹಾಗೂ ದ್ವಿ-ಚಕ್ರ ವಾಹನ ಸೇರಿದಂತೆ ಒಟ್ಟು ೧೫,೫೬,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.