ಚೇಳೂರು: ಅಜ್ಜಿಯಿಂದಲೇ ತನ್ನ 40 ದಿನ ಹಸುಗೂಸಿನ ಮರ್ಯಾದಾ ಹತ್ಯೆಯಾಗಿದೆ ಎಂದು ಆರೋಪಿಸಿ ಠಾಣೆಗೆ ದೂರು ಕೊಡಲು ಹೋದಾಗ ಪರಿಶೀಲಿಸಿದ ಪೊಲೀಸರು, ಆಕೆ ಅಪ್ರಾಪ್ತ ಎಂದು ತಿಳಿದು ಪ್ರಕರಣ ದಾಖಲಿಸಿ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.

ಜತೆಗೆ ಪತಿಯ ವಿರುದ್ಧ ಪೋಕೋ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಹೂತಿಟ್ಟ 40 ದಿನಗಳ ಶಿಶುವಿನ ಶವವನ್ನೂ ಹೊರ ತೆಗೆದು ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಚೇಳೂರು ಪಟ್ಟಣದ ಚಿಂತಾಮಣಿ ನಗರದ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅನ್ಯಕೋಮಿನ ಅಪ್ರಾಪ್ತ ರಾಜೇಶ್ ಅಲಿ ಯಾಸ್ ನಾಗರಾಜು ಜತೆ ಪ್ರೇಮದಲ್ಲಿ ಬಿದ್ದಿದ್ದಾಳೆ. ಇಬ್ಬರೂ ವಿವಾಹವಾಗಿದ್ದು, ಚಿಂತಾ ಮಣಿಯಲ್ಲೇ ವಾಸವಿದ್ದರು.
ಡಿ.12 ರಂದು ಆಂಧ್ರಪ್ರದೇಶದ ಆಸ್ಪತ್ರೆಯೊಂದರಲ್ಲಿ ಗಂಡು ಶಿಶುವಿಗೆ ಆಕೆ ಜನ್ಮ ನೀಡಿದ್ದಳು. ಬಳಿಕ ಮಗುವಿನೊಂದಿಗೆ ಡಿ.17 ರಂದು ಚೇಳೂರಿಗೆ ಆಗಮಿಸಿ ಬಾಗೇಪಲ್ಲಿ ಮುಖ್ಯರಸ್ತೆಯ ಹೋಟೆಲ್ ವೊಂದರಲ್ಲಿ ವಾಸವಿದ್ದರು ಎನ್ನ ಲಾಗಿದೆ. ಅಲ್ಲಿಗೆ ಬಂದ ಬಾಲಕಿ ಅಜ್ಜಿಯು ಆ ಮಗುವನ್ನು ತಾನು ಸಾಕುವುದಾಗಿ ಪಡೆದು ಊರಿಗೆ ತೆರಳಿದ್ದಾರೆ. ಬಳಿಕ ಮಗು ಮೃತ ಪಟ್ಟಿರುವುದಾಗಿ ಹೇಳಿದ್ದಾಳೆ. ಈ ಸಂಬಂಧ ಡಿ.21ರಂದು ತನ್ನ ಅಜ್ಜಿಯೇ ಮರ್ಯಾದಾ ಹತ್ಯೆ ಮಾಡಿದ್ದಾಳೆಂದು ಆರೋಪಿಸಿ ಚೇಳೂರು ಠಾಣೆಗೆ ದೂರು ಸಲ್ಲಿಸಿದ್ದಳು.
ಮರಣೋತ್ತರ ಪರೀಕ್ಷೆಗೆ ಶಿಶುವಿನ ಶವ
ಸ್ಥಳೀಯರ ಮಾಹಿತಿ ಮೇರೆಗೆ ಚೇಳೂರಿನ ಬಾಗೇಪಲ್ಲಿ ರಸ್ತೆ ಮೋರಿ ಬಳಿಯ ಜಮೀನಿನಲ್ಲಿ ನವಜಾತ ಶಿಶುವನ್ನು ಹೂತಿರುವ ಸ್ಥಳ ಗುರುತಿಸಿ ಮೃತದೇಹವನ್ನು ಹೊರತೆಗೆದು ಪರೀಕ್ಷೆಗೆ ಕಳುಹಿಸಿದ್ದಾರೆ.
ಪೋಕೋ ಕೇಸ್
ತನಿಖೆ ಕೈಗೊಂಡಿದ್ದ ಚೇಳೂರು ಪೊಲೀಸರಿಗೆ ಆಕೆ ಅಪ್ರಾಪ್ತ ಎಂಬುದು ಗೊತ್ತಾಗಿದ್ದು, ಬಾಲ ಮಂದಿರಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಆಕೆ ಪತಿ ವಿರುದ್ಧ ಪೋಕೋ ಪ್ರಕರಣವನ್ನು ದಾಖಲಿಸಿದ್ದಾರೆ.




