ಉಡುಪಿ: ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆ ಯಲ್ಲಿ ಶನಿವಾರ ಪಿಯುಸಿವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಮಧ್ಯಾಹ್ನ ಬಳಿಕ ಹಲವೆಡೆ ಮಳೆ ಬಿರುಸಾಗಿತ್ತು. ಕುಂದಾ ಪುರ, ಬೈಂದೂರು ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಅಮಾಸೆಬೈಲು ಬಳ್ಮನೆ ಭಾಗದಲ್ಲೂ ಮನೆಗಳಿಗೆ ಹಾನಿಯಾಗಿದೆ.
ನಾವುಂದ, ಮರವಂತೆ, ಪಡುಕೋಣೆ ಭಾಗದಲ್ಲಿ ನೆರೆ ನೀರು ಇನ್ನೂ ಇಳಿಮುಖವಾಗಿಲ್ಲ. ಉಡುಪಿ ತಾಲೂಕಿನ ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಅಲೆವೂರು, ಕೆಮೂ¤ರು, ಉದ್ಯಾವರ ಭಾಗದಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಹಲವು ಜನರನ್ನು ರಕ್ಷಿಸಲಾಯಿತು. ಕಲ್ಯಾಣಪುರ ಹೊಳೆ ಉಕ್ಕಿ ಹರಿದಿದ್ದು, ಸೇತುವೆ, ಸಂಪರ್ಕ ರಸ್ತೆಗಳು ಮುಳುಗಡೆಯಾಗಿದ್ದು, ಮೂಡುಕುದ್ರು, ನಿಡಂಬಳ್ಳಿ ಭಾಗದಲ್ಲಿ ಮನೆ, ಗದ್ದೆ, ತೋಟಗಳು ಜಲಾವೃತ ಗೊಂಡಿವೆ.
ಕಾರ್ಕಳ, ಅಜೆಕಾರು, ಬೈಲೂರು, ಮಾಳ, ನಿಟ್ಟೆ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿದಿದೆ. ಎರಡು ದಿನಗಳಲ್ಲಿ ಜಿಲ್ಲೆಯ 31ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕುಂದಾ ಪುರದ ಹಲ್ಕೂರು, ಸಿದ್ದಾಪುರ, ಗುಲ್ವಾಡಿ ಭಾಗದಲ್ಲಿ ಅಡಿಕೆ ತೋಟಗಳಿಗೆ ಹಾನಿ ಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ತಾಸಿನಲ್ಲಿ ಸರಾಸರಿ 149.2 ಮಿ. ಮೀ. ಮಳೆಯಾಗಿದೆ.