ಹೆಣ್ಣಿನ ರಕ್ಷಣೆಗಾಗಿ ಒಂದು ದ್ವೀಪವನ್ನೇ ಸುಟ್ಟ ಇತಿಹಾಸ ನಮ್ಮದು. ಈಗ ಕರಗುತ್ತಿರುವ ಮೋಂಬತ್ತಿಯ ಜಾಗದಲ್ಲಿ ಅಂದು ಉರಿದು ಕರಕಲಾಗುತ್ತಿದ್ದದ್ದು ಯುದ್ಧದಲ್ಲಿ ಧ್ವಂಸಗೊಂಡ ಕಟುಕರ ದೇಹಗಳು.
ಧರ್ಮದ ಪರ ನಿಲ್ಲಲು ಅಣ್ಣನನ್ನೇ ಎದುರು ಹಾಕಿಕೊಂಡ ವಿಭೀಷಣನಂತಹ ಮಾನವ ಜನ್ಮ, ಈಗ ಇದೆಲ್ಲಿ ಬಂದು ನಿಂತಿದೆ? ಹೆಣ್ಣಿಗೆ ಹೆಣ್ಣು, ನ್ಯಾಯ, ಧರ್ಮ, ನೀತಿ ಎಲ್ಲವೂ ಶತ್ರು ಎನ್ನುವ ಸ್ಥಿತಿ.
ಹೆಣ್ಣನ್ನು ಅಪಹರಿಸಿದ್ದಕ್ಕೆ ಇಡೀ ರಾಮಾಯಣವೇ ಸೃಷ್ಟಿಯಾಗಿರುವಾಗ, ದಿನಾ ರಸ್ತೆಯಲ್ಲಿ ಕೈಚೆಲ್ಲಿ ಹೋಗುತ್ತಿರುವ ಹೆಣ್ಣಿನ ಮಾನ ಪ್ರಾಣದಿಂದ ಭಾರತ ಅದೆಷ್ಟು ರಾಮಾಯಣ ದೃಷ್ಟಿಸಬೇಕಿತ್ತು..?
ಇಂದಿಗೂ ದಸರಾಗೆ ರಾವಣನನ್ನು ಸುಡುವ ನಾವು, ನಮ್ಮೊಳಗಿನ ರಾವಣನನ್ನು ಯಾಕೆ ಗುರುತಿಸಲಿಲ್ಲ?
ಹಾಗಾದರೆ ನಾವು ರಾವಣ ದಹನ ಕೇವಲ ಆಚರಣೆಯಾ ಅಥವಾ ಬರೀಯ ಸೋಶಿಯಲ್ ಮೀಡಿಯಾ ಸ್ಟೋರಿ, ಲೈಕ್ ಗೋಸ್ಕರ ಅಷ್ಟೇನಾ?
ನಿಜವಾದ ರಾವಣ ನಮ್ಮಲ್ಲೇ ಎಲ್ಲೋ ನಿಂತು ನಗುತ್ತಿರುವಾಗ ಅದ್ಯಾವುದೋ ಗೊಂಬೆಗೆ ಬೆಂಕಿ ಕೊಟ್ಟು ನಾವು ನಮ್ಮನ್ನೇ ಭ್ರಮೆಯಲ್ಲಿ ಇರಿಸಿದಂತೆ ಅಲ್ಲವೇ?
ನ್ಯಾಯಕ್ಕಾಗಿ ಕರಡಿ, ಗರುಡ, ಕೋತಿ, ಮರ, ಗಿಡ, ಪಶು ಪಕ್ಷಿ ಹೀಗೆ ಪ್ರಕೃತಿಯೇ ಜೊತೆಯಾಗುತ್ತಿದ್ದ ಆ ಕಾಲ ಈಗ ಎಲ್ಲಿ ಮರೆಯಾಯಿತು??
ಇದೇ ಮಣ್ಣಲ್ಲಿ ಜಾನಕಿ ಹುಟ್ಟಿದ್ದು, ಇದೇ ಮಣ್ಣಲ್ಲಿ ರಾಮ ತನ್ನ ಕಾಲಿಟ್ಟಿದ್ದು, ಇದೇ ಮಣ್ಣಲ್ಲಿ ವಿಜಯ ಪತಾಕೆಗಳು ಬೇರೂರಿದ್ದು.. ಆದರೆ ಈಗ..?
ಅದೇ ಪವಿತ್ರ ಭೂಮಿ, ಹೆಣ್ಣಿನ ಕಣ್ಣೀರು, ಮೊಂಬತ್ತಿಯ ಮೇಣ, ಪೋಸ್ಟರ್ಗಳ ಕಸದಿಂದ ಮುಚ್ಚಿ ಹೋಗಿದೆ.
ನ್ಯಾಯಕ್ಕಾಗಿ ನಾವು ಕೈ ಚಾಚಿ ನಿಂತಿರುವುದು ಕೂಡ ಕಣ್ಣಿಗೆ ಬಟ್ಟೆ ಕಟ್ಟಿ ನಿಂತ ಹೆಣ್ಣಿನ ಎದುರೇ!
ಸಾಕಿನ್ನು ಮುನ್ನಡೆದದ್ದು ನವ ಭಾರತ….; ಇನ್ನು ಸ್ವಲ್ಪ ಹಿಂದೆ ತ್ರೇತಾಯುಗಕ್ಕೆ ಹೋಗೋಣ… ಮತ್ತೆ ರಾವಣ ದಹನ, ಲಂಕಾ ಪತನ, ಮತ್ತೆ ಕಾಣಬೇಕು ನಾವು ದಶಾನನನ ಮರಣ… ಆಗಲಿ ಹೊಸ ಭಾರತದ ನಿರ್ಮಾಣ… ಸಿಗಲಿ ಹೆಣ್ಣು ಧೈರ್ಯವಾಗಿ ರಸ್ತೆಗಿಳಿಯಲು ಕಾರಣ.
ಈ ದಸರಾ ನಮ್ಮೊಳಗಿನ, ನಮ್ಮ ನಡುವಿನ ರಾವಣನನ್ನು ಭಸ್ಮ ಮಾಡಲಿ. ಈ ಬಾರಿಯ ದಸರಾ ನಮ್ಮೊಳಗೂ ಹಲವು ಹನುಮನ ಸೃಷ್ಟಿಸಲಿ, ದ್ವೀಪ ಉರಿದ ಕಾಲ ಮತ್ತೆ ಬರಲಿ, ಇನ್ನು ಉರಿಯಬೇಕಾದದ್ದು ಮೋಂಬತ್ತಿಯಲ್ಲ ಕಾಮದ ಹುಟ್ಟಡಗಿಸುವ ನ್ಯಾಯದ ಕಾಡ್ಗಿಚ್ಚು. ಕಿಡಿ ಹತ್ತಿ ಕಿಚ್ಚು ಚದುರಿ ಹಲವು ಕಪಟಿಗಳ ದಹನವಾಗಲಿ.